ದೇವೇಂದ್ರ ಫಡಣವೀಸ್
(ಪಿಟಿಐ ಚಿತ್ರ)
ಮುಂಬೈ: ನಗರದ ಸರ್ಕಾರಿ ಕ್ಯಾಂಟೀನ್‌ವೊಂದರಲ್ಲಿ ಹಳಸಿದ ಆಹಾರ ನೀಡಿದ್ದಕ್ಕೆ ಮಹಾರಾಷ್ಟ್ರದ ಆಡಳಿತಾರೂಢ ಸರ್ಕಾರದ ಭಾಗವಾಗಿರುವ ಶಿವಸೇನಾ ಶಾಸಕ ಸಂಜಯ್ ಗಾಯಕವಾಡ್ ಸಿಬ್ಬಂದಿಗೆ ಥಳಿಸಿದ ಘಟನೆಯಿಂದ ಎಲ್ಲಾ ಶಾಸಕರು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಶಿವಸೇನಾ (ಯುಬಿಟಿ) ಶಾಸಕ ಅನಿಲ್ ಪರಬ್ ಅವರು ವಿಧಾನ ಪರಿಷತ್ತಿನಲ್ಲಿ ಸಂಜಯ್ ಗಾಯಕವಾಡ್ ಹಲ್ಲೆ ಪ್ರಕರಣವನ್ನು ಪ್ರಸ್ತಾಪಿಸಿದ್ದು, ‘ಆಡಳಿತ ಪಕ್ಷದ ಶಾಸಕರು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳು ಸಿಎಂ ಫಡಣವೀಸ್ ಅವರ ಘನತೆಗೆ ಧಕ್ಕೆಯುಂಟು ಮಾಡುತ್ತವೆ’ ಎಂದು ಹೇಳಿದ್ದಾರೆ.
ಕೂಡಲೇ ಪ್ರತಿಕ್ರಿಯಿಸಿದ ಫಡಣವೀಸ್, ‘ಇಂತಹ ನಡವಳಿಕೆ ಯಾರಿಗೂ ಸೂಕ್ತವಲ್ಲ. ಇದು ಶಾಸಕಾಂಗ ಮತ್ತು ಜನಪ್ರತಿನಿಧಿಗಳ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರುತ್ತದೆ. ಕ್ಯಾಂಟೀನ್ ಆಹಾರದ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ, ಅದರ ಬಗ್ಗೆ ಔಪಚಾರಿಕವಾಗಿ ದೂರು ನೀಡಬಹುದು. ಈ ಕುರಿತು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
‘ಕ್ಯಾಂಟೀನ್‌ನಲ್ಲಿ ಸಮಸ್ಯೆಗಳಿದ್ದರೆ ಕ್ರಮ ಕೈಗೊಳ್ಳಬಹುದು. ಆದರೆ, ಸಾರ್ವಜನಿಕವಾಗಿ ಜನಪ್ರತಿನಿಧಿಗಳು ಹಲ್ಲೆ ನಡೆಸುವುದು ಒಳ್ಳೆಯ ಸಂದೇಶ ರವಾನಿಸುವುದಿಲ್ಲ. ಇದು ಗಂಭೀರ ವಿಷಯವಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯ ಸ್ಪೀಕರ್ ರಾಹುಲ್ ನರ್ವೇಕರ್ ಮತ್ತು ವಿಧಾನ ಪರಿಷತ್ ಸಭಾಪತಿ ರಾಮ್ ಶಿಂದೆ ಅವರನ್ನು ವಿನಂತಿಸುತ್ತೇನೆ’ ಎಂದು ಸಿಎಂ ತಿಳಿಸಿದ್ದಾರೆ.
ಸರ್ಕಾರಿ ಕ್ಯಾಂಟೀನ್‌ನಲ್ಲಿ ಹಳಸಿದ ಆಹಾರ ನೀಡಿದ್ದಕ್ಕೆ ಸಂಜಯ್ ಗಾಯಕವಾಡ್ ಅವರು ಸಿಬ್ಬಂದಿಗೆ ಥಳಿಸಿದ್ದರು. ಸಂಜಯ್ ಅವರು ಕ್ಯಾಂಟೀನ್ ಸಿಬ್ಬಂದಿಯ ಕೆನ್ನೆಗೆ ಹೊಡೆದು, ಮುಖಕ್ಕೆ ಗುದ್ದಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಸಂಜಯ್, ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷದವರಾಗಿದ್ದು, ಬುಲ್ದಾನಾ ಕ್ಷೇತ್ರದ ಶಾಸಕರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.