ADVERTISEMENT

ಧನಕರ್ ಅವರನ್ನು ಅಣಕಿಸಿದ ಪ್ರಕರಣ | ಜಾತಿ ಎಳೆದು ತರುವ ಕೆಲಸ ಬೇಡ: ಖರ್ಗೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 15:53 IST
Last Updated 20 ಡಿಸೆಂಬರ್ 2023, 15:53 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ಪಿಟಿಐ ಚಿತ್ರ

ನವದೆಹಲಿ: ಪ್ರತಿ ವಿಚಾರದಲ್ಲಿಯೂ ಜಾತಿಯನ್ನು ಎಳೆದು ತರುವ ಕೆಲಸ ಆಗಬಾರದು ಎಂದು ಹೇಳಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯಲ್ಲಿ ತಮಗೆ ಮಾತನಾಡಲು ಅವಕಾಶ ಕೊಡದೆ ಇದ್ದಾಗಲೆಲ್ಲ ತಮ್ಮ ಜಾತಿಯ ಕಾರಣಕ್ಕಾಗಿ ಹೀಗಾಗುತ್ತಿದೆ ಎಂದು ದೂರಬೇಕೇ ಎಂದು ಪ್ರಶ್ನಿಸಿದರು.

ADVERTISEMENT

ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಅವರು ಅಣಕಿಸಿರುವುದು ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಖರ್ಗೆ ಈ ಪ್ರಶ್ನೆ ಎತ್ತಿದ್ದಾರೆ. ರಾಜ್ಯಸಭೆಯ ಸಭಾಪತಿ ಕೂಡ ಆಗಿರುವ ಧನಕರ್ ಅವರು ತಮ್ಮನ್ನು ಅಣಕಿಸಿದ್ದನ್ನು ಖಂಡಿಸಿದ್ದಾರೆ. ಅಣಕಿಸಿರುವುದು ತಮ್ಮ ರೈತಾಪಿ ಹಿನ್ನೆಲೆ ಹಾಗೂ ಜಾಟ್ ಜಾತಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. ಆಡಳಿತಾರೂಢ ಬಿಜೆಪಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ.

ಸುದ್ದಿಗಾರರ ಜೊತೆ ಮಾತನಾಡಿದ ಖರ್ಗೆ ಅವರು, ‘ಸದನದ ಸದಸ್ಯರಿಗೆ ರಕ್ಷಣೆ ಒದಗಿಸುವ ಕೆಲಸವನ್ನು ಸಭಾಪತಿ ಮಾಡಬೇಕು. ಆದರೆ ಅವರೇ ಇಂತಹ ಹೇಳಿಕೆ ನೀಡುತ್ತಿದ್ದಾರೆ’ ಎಂದರು. ‘ನನಗೆ ರಾಜ್ಯಸಭೆಯಲ್ಲಿ ಮಾತನಾಡಲು ಹಲವು ಬಾರಿ ಅವಕಾಶ ಕೊಟ್ಟಿಲ್ಲ. ನಾನು ದಲಿತ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂದು ಹೇಳಬೇಕೇ’ ಎಂದು ಖರ್ಗೆ ಪ್ರಶ್ನಿಸಿದರು.

ಜಾತಿಯ ಬಗ್ಗೆ ಸದನದ ಒಳಗೆ ಮಾತನಾಡಿ ಸದನದ ಹೊರಗಿರುವ ಜನರನ್ನು ಪ್ರಚೋದಿಸುವ ಕೆಲಸ ಮಾಡಬಾರದು ಎಂದರು.

ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ತಮ್ಮ ಜಾತಿಯ ಬಗ್ಗೆ ಮಾತನಾಡುವುದು ಇಡೀ ದೇಶದ ಪಾಲಿಗೆ ಬೇಸರದ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ಹೇಳಿದರು.

ಸಂಸದರನ್ನು ಅಮಾನತು ಮಾಡಿದ ಕ್ರಮವನ್ನು ವಿರೋಧಿಸಿ ಸಂಸತ್ತಿನ ಮೆಟ್ಟಿಲುಗಳ ಮೇಲೆ ವಿರೋಧ ಪಕ್ಷಗಳ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬ್ಯಾನರ್ಜಿ ಅವರು ಧನಕರ್ ಅವರನ್ನು ಅಣಕಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಅಣಕವಾಡಿದ್ದನ್ನು ಬಿಜೆಪಿ ಖಂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.