ADVERTISEMENT

ಗುಜರಾತ್‌ನಿಂದ ಬಿಹಾರಕ್ಕೆ ಹೊರಟ ಶ್ರಮಿಕ್‌ ವಿಶೇಷ ರೈಲು ಕರ್ನಾಟಕ ತಲುಪಿತು!

ಅಭಯ್ ಕುಮಾರ್
Published 26 ಮೇ 2020, 11:43 IST
Last Updated 26 ಮೇ 2020, 11:43 IST
ಶ್ರಮಿಕ್‌ ವಿಶೇಷ ರೈಲಿನಲ್ಲಿ ಸಂಚರಿಸಲು ಸಾಲುಗಟ್ಟಿರುವ ವಲಸೆ ಕಾರ್ಮಿಕರು–ಸಂಗ್ರಹ ಚಿತ್ರ
ಶ್ರಮಿಕ್‌ ವಿಶೇಷ ರೈಲಿನಲ್ಲಿ ಸಂಚರಿಸಲು ಸಾಲುಗಟ್ಟಿರುವ ವಲಸೆ ಕಾರ್ಮಿಕರು–ಸಂಗ್ರಹ ಚಿತ್ರ   
""

ಪಟನಾ: ವಲಸೆ ಕಾರ್ಮಿಕರನ್ನು ಹೊತ್ತು ಗುಜರಾತ್‌ನಿಂದ ಬಿಹಾರದ ಕಡೆಗೆ ಹೊರಟ ಶ್ರಮಿಕ್‌ ವಿಶೇಷ ರೈಲು ತಲುಪಿದ್ದು ಕರ್ನಾಟಕ. 1,200 ವಲಸೆ ಕಾರ್ಮಿಕರನ್ನು ಹೊತ್ತು ಹೊರಟ ಮತ್ತೊಂದು ಶ್ರಮಿಕ್‌ ವಿಶೇಷ ರೈಲು ಸೂರತ್‌ನಿಂದ ಬಿಹಾರದ ಛಪ್ರಾ ತಲುಪಬೇಕಿತ್ತು. ಆದರೆ, ಸೇರಿದ್ದು ಒಡಿಶಾದ ರೂರ್ಕೆಲಾ. ಇಂಥದ್ದೇ ಇನ್ನೂ ಎರಡು ರೈಲುಗಳು ಪಟನಾ ತಲುಪುವ ಬದಲು ಪಶ್ಚಿಮ ಬಂಗಾಳದ ಪುರುಲಿಯಾ ಹಾಗೂ ಗಯಾ ತಲುಪಿವೆ.

ಕೋವಿಡ್‌–19 ಲಾಕ್‌ಡೌನ್‌ನಿಂದ ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿದ್ದ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರನ್ನು ನೂರಾರು ಶ್ರಮಿಕ್‌ ವಿಶೇಷ ರೈಲುಗಳ ಮೂಲಕ ಅವರ ಊರುಗಳಿಗೆ ತಲುಪಿಸಿರುವುದಾಗಿ ರೈಲು ಸಚಿವಾಲಯ ಹೇಳಿದೆ. ಆದರೆ, ರೈಲ್ವೆ ಕಾರ್ಯಾಚರಣೆ ಹಾದಿ ತಪ್ಪಿದೆ ಹಾಗೂ ವ್ಯವಸ್ಥೆಯು ಸಂಪೂರ್ಣ ಹಳಿ ತಪ್ಪಿದೆ.

ಇಲ್ಲವಾದರೆ, ಮೇ 16ರಂದು ಸೂರತ್‌ನಿಂದ ಹೊರಟು ಮೇ 18ರಂದು ಉತ್ತರ ಬಿಹಾರದ ಛಪ್ರಾ ತಲುಪಬೇಕಿದ್ದ ರೈಲು ಬೆಂಗಳೂರು ತಲುಪಿದ್ದು ಹೇಗೆ? ರೈಲ್ವೆ ಇಲಾಖೆಯ ವ್ಯವಸ್ಥೆ ಸರಿ ಇದ್ದುದ್ದೇ ಆದರೆ, ಇದಕ್ಕೆ ಯಾವ ವಿವರಣೆ ನೀಡುತ್ತಾರೆ. ಆ ರೈಲು ಪತ್ತೆಯಾದ ನಂತರ ಅದನ್ನು ಮೇ 25ರಂದು ಛಪ್ರಾಗೆ ತರಲಾಯಿತು. ಒಂದೂವರೆ ಎರಡು ದಿನಗಳ ಪ್ರಯಾಣದ ಬದಲುಇಂಥ ಬೇಸಿಗೆಯಲ್ಲಿ 9 ದಿನಗಳ ಅಗ್ನಿ ಪರೀಕ್ಷೆ ಹಾಗೂ ಹೇಳಿಕೊಳ್ಳಲಾಗದ ಸಂಕಷ್ಟವನ್ನು ಪ್ರಯಾಣಿಕರು ಅನುಭವಿಸಿದ್ದಾರೆ.

ADVERTISEMENT

ಪೂರ್ವ ಮಧ್ಯ ರೈಲ್ವೆಯ (ಇಸಿಆರ್‌) ಮುಖ್ಯ ಸಾರ್ವಜನಿಕ ಸಂಪನ್ಮೂಲ ಅಧಿಕಾರಿ (ಸಿಪಿಆರ್‌ಒ) ರಾಜೇಶ್‌ ಕುಮಾರ್‌, ಅಂಥ ಯಾವುದೇ ಲೋಪ ಆಗಿರುವುದನ್ನು ತಳ್ಳಿ ಹಾಕಿದ್ದಾರೆ. ಆದರೆ, ರೈಲ್ವೆ ಇಲಾಖೆಯಲ್ಲಿನ (ಉತ್ತರ ಪ್ರದೇಶ) ಮೂಲಗಳು ಮಂಗಳವಾರ ಡೆಕ್ಕನ್‌ ಹೆರಾಲ್ಡ್‌ಗೆ ರೈಲುಗಳು ದಾರಿ ತಪ್ಪಿರುವುದನ್ನು ಸ್ಪಷ್ಟಪಡಿಸಿವೆ.

ಗುಜರಾತ್‌ನ ಸೂರತ್‌ನಿಂದ ಹೊರಟು ಬಿಹಾರ ತಲುಪಬೇಕಿದ್ದ ರೈಲು (ಸಂಖ್ಯೆ 0912791), ಮಹಾರಾಷ್ಟ್ರದ ಭುಸಾವಲ್‌ನಲ್ಲಿ ಉತ್ತರಕ್ಕೆ ಅಲಹಾಬಾದ್‌ (ಪ್ರಯಾಗ್‌ರಾಜ್‌) ಕಡೆಯ ಹಳಿಯ ಮೇಲೆ ಸಾಗಬೇಕಿದ್ದ ರೈಲು ದಕ್ಷಿಣದ ಹಾದಿ ಹಿಡಿದು ಬೆಂಗಳೂರು ತಲುಪಿದೆ.

'ಇಂಥದ್ದೇ ದೋಷ ಮತ್ತೊಂದು ರೈಲು ಸಂಚಾರದಲ್ಲೂ ಉಂಟಾಗಿದೆ. ಸೂರತ್‌–ಸಿವಾನ್‌ ಶ್ರಮಿಕ್‌ ವಿಶೇಷ ರೈಲು ಒಡಿಶಾದ ರೂರ್ಕೆಲಾ ಕಡೆಗೆ ಮರಳಿದೆ' ಎಂದು ಹೆಸರು ಬಹಿರಂಗಪಡಿಸದಿರುವ ಷರತ್ತಿನ ಮೇಲೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 'ಎರಡೂ ರೈಲುಗಳ ಸಂಚಾರವನ್ನು ಗುರುತಿಸಿ ಅವುಗಳನ್ನು ಬಿಹಾರದ ಛಪ್ರಾ ಹಾಗೂ ಸಿವಾನ್‌ಗೆ ಮೇ 25ರಂದು ತಲುಪಿಸಲಾಗಿದೆ' ಎಂದಿದ್ದಾರೆ.

'ರಾಜ್ಯ ಸರ್ಕಾರಗಳ ಮನವಿ ಮೇರೆಗೆ ಶ್ರಮಿಕ್‌ ವಿಶೇಷ ರೈಲುಗಳ ಸಂಚಾರ ನಡೆಸಲಾಗಿದೆ. ಹಾಗಾಗಿ, ಇದು ಸಂಪೂರ್ಣ ರೈಲ್ವೆ ಇಲಾಖೆ ದೋಷವಲ್ಲ' ಎಂದು ಅವರು ವಾದಿಸಿದ್ದಾರೆ. ಆದರೆ, ನಿರ್ದಿಷ್ಟ ರೈಲು ಸಂಚರಿಸಬೇಕಾದ ಮಾರ್ಗ ಹಾಗೂ ಹಳಿಯ ಕುರಿತು ನಿರ್ಧರಿಸುವ ಹೊಣೆ ರಾಜ್ಯ ಸರ್ಕಾರದ್ದೇ ಎಂದು ಕೇಳಲಾದ ಪ್ರಶ್ನೆಗೆ ಅವರಿಂದ ಯಾವುದೇ ಉತ್ತರ ದೊರೆಯಲಿಲ್ಲ.

'ಶ್ರಮಿಕ್‌ ವಿಶೇಷ ರೈಲುಗಳಲ್ಲಿ ಎರಡು ಸಂಗತಿಗಳು ಮಾತ್ರ ಮುಖ್ಯವಾಗುತ್ತವೆ. ರೈಲು ಹೊರಡುವ ನಿಲ್ದಾಣ ಹಾಗೂ ತಲುಪುವ ಸ್ಥಳ. ತಲುಪಬೇಕಾದ ಸ್ಥಳವನ್ನು ತಲುಪಿದರೆ, ಅಲ್ಲಿಗೆ ಕಥೆ ಮುಗಿಯಿತು... ನೀವು ಯಾವ ಮಾರ್ಗದಲ್ಲಿ ಸಂಚರಿಸಿದಿರಿ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಏಕೆಂದರೆ ಬಹಳಷ್ಟು ಸಲ ಮುಖ್ಯ ಮಾರ್ಗದಲ್ಲಿ ದಟ್ಟಣೆಯಿಂದ ನಾವು ಮಾರ್ಗ ಬದಲಿಸಬೇಕಾಗಿ ಬರುತ್ತದೆ' ಎಂದು ಆಗಿರುವುದಕ್ಕೆ ಸಮಜಾಯಿಷಿ ನೀಡುವ ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.