ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್ಎಸ್) ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ವಿಡಿಯೊ ಲಿಂಕ್ ಮೂಲಕ ಸಂಭಾಷಣೆ ನಡೆಸಿದರು.
ಸುಮಾರು 18 ನಿಮಿಷಗಳ ಸಂವಾದದಲ್ಲಿ ಇಬ್ಬರೂ ‘ಭಾರತ ಮಾತಾ ಕಿ ಜೈ’ ಘೋಷಣೆಗಳನ್ನು ವಿನಿಮಯ ಮಾಡಿಕೊಂಡರು.
‘ಗಗನಯಾನ ಯೋಜನೆಯನ್ನು ಯಶಸ್ವಿಗೊಳಿಸುವ, ನಮ್ಮದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಮತ್ತು ಚಂದ್ರನ ಮೇಲೆ ಭಾರತದ ಗಗನಯಾನಿಯನ್ನು ಕಳುಹಿಸುವುದೂ ಸೇರಿದಂತೆ ದೇಶದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಶುಭಾಂಶು ಶುಕ್ಲಾ ಅವರ ಅನುಭವಗಳು ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿವೆ’ ಎಂದು ಪ್ರಧಾನಿ ಅವರು ಬಣ್ಣಿಸಿದರು.
‘ಶುಭಾಂಶು ಅವರೇ, ನೀವು ಈಗ ಭೂಮಿಯಿಂದ ಅತ್ಯಂತ ಎತ್ತರದಲ್ಲಿದ್ದೀರಿ (400 ಕಿ.ಮೀ). ಆದರೆ ಇದೇ ವೇಳೆ ನೀವು ಪ್ರತಿ ಭಾರತೀಯರ ಹೃದಯಕ್ಕೆ ಹತ್ತಿರದಲ್ಲಿದ್ದೀರಿ’ ಎಂದರು.
‘ನಿಮ್ಮ ಹೆಸರು ‘ಶುಭ್’ (ಶುಭ) ಎಂಬ ಪದವನ್ನು ಹೊಂದಿದೆ. ಆ ಮೂಲಕ ನಿಮ್ಮ ಪ್ರಯಾಣವು ಹೊಸ ಯುಗದ ಶುಭಾರಂಭವನ್ನು ಗುರುತಿಸಿದೆ. ನೀವು ಅಲ್ಲಿನ ಪ್ರತಿ ಅನುಭವವನ್ನೂ ದಾಖಲಿಸುತ್ತಿದ್ದೀರಿ ಎಂಬ ವಿಶ್ವಾಸ ನನಗಿದೆ. ಇದೆಲ್ಲ ದೇಶದ ಯುವ ಜನರಿಗೆ ದೊಡ್ಡ ಸ್ಫೂರ್ತಿಯಾಗಲಿದೆ’ ಎಂದು ವಿವರಿಸಿದರು.
ಈ ವೇಳೆ ಮಾತನಾಡಿದ ಶುಭಾಂಶು, ‘ನನ್ನ ಈ ಬಾಹ್ಯಾಕಾಶ ಯಾನದ ಜತೆಗೆ ಇಡೀ ದೇಶವಿದೆ. ಇಲ್ಲಿನ ಅನುಭವಗಳನ್ನು ನಾನು ಸ್ಪಂಜಿನಂತೆ ಹೀರಿಕೊಳ್ಳುತ್ತಿದ್ದೇನೆ’ ಎಂದು ತಿಳಿಸಿದರು.
ತಲಾ 16 ಬಾರಿ ಸೂರ್ಯೋದಯ, ಸೂರ್ಯಾಸ್ತ
‘ಬಾಹ್ಯಾಕಾಶ ನಿಲ್ದಾಣವು ದಿನಕ್ಕೆ 16 ಬಾರಿ ಭೂಮಿಯನ್ನು ಸುತ್ತುತ್ತಿದೆ. ಇಲ್ಲಿ ದಿನಕ್ಕೆ 16 ಸೂರ್ಯೋದಯ ಮತ್ತು 16 ಸೂರ್ಯಾಸ್ತಗಳನ್ನು ವೀಕ್ಷಿಸುವ ಸೌಭಾಗ್ಯ ನನಗೆ ದೊರೆತಿದೆ. ಸದ್ಯಕ್ಕೆ ನಾವು ಗಂಟೆಗೆ 28,000 ಕಿ.ಮೀ ವೇಗದಲ್ಲಿ ಪ್ರಯಾಣಿಸುತ್ತಿದ್ದೇವೆ. ಈ ವೇಗವು ನಮ್ಮ ದೇಶ ಎಷ್ಟು ವೇಗವಾಗಿ ಪ್ರಗತಿ ಹೊಂದಿತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ನಾವು ಅದನ್ನೂ ಮೀರಿ ಪ್ರಗತಿ ಹೊಂದಬೇಕು’ ಎಂದು ಶುಕ್ಲಾ ಹೇಳಿದರು.
‘ಕ್ಯಾರೆಟ್ ಮತ್ತು ಹೆಸರು ಕಾಳಿನ ಹಲ್ವಾ, ಮಾವಿನ ರಸವನ್ನು ಇಲ್ಲಿಗೆ ತಂದಿದ್ದೇನೆ. ಅವುಗಳನ್ನು ಇಲ್ಲಿನ ಗಗನಯಾನಿಗಳೂ ಸವಿಯಲಿದ್ದಾರೆ’ ಎಂದರು.
‘ಆಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಶುಕ್ಲಾ ಮತ್ತು ಇತರ ಮೂವರು ಗಗನಯಾನಿಗಳು ಗುರುವಾರ ಐಎಸ್‌ಎಸ್ ತಲುಪಿದ್ದಾರೆ. ಇವರು ಅಲ್ಲಿ 14 ದಿನಗಳವರೆಗೆ ವಾಸ್ತವ್ಯ ಇರಲಿದ್ದು, ಹಲವು ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ. ಪ್ರಸ್ತುತ ಐಎಸ್‌ಎಸ್‌ನಲ್ಲಿ ಆರು ದೇಶಗಳ 11 ಗಗನಯಾನಿಗಳು ಇದ್ದಾರೆ.
ಮಲಗುವುದು ದೊಡ್ಡ ಸವಾಲು: ‘ಇಲ್ಲಿ ಎಲ್ಲವೂ ವಿಭಿನ್ನವಾಗಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿನ ಸೂಕ್ಷ್ಮ ಗುರುತ್ವ ಪರಿಸ್ಥಿತಿಗಳಂತೂ ಇನ್ನೂ ವಿಭಿನ್ನವಾಗಿದೆ. ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಇಲ್ಲಿ ಮಲಗುವುದು ದೊಡ್ಡ ಸವಾಲು’ ಎಂದು ಶುಭಾಂಶು ಶುಕ್ಲಾ ಅವರು ಅನುಭವ ಹಂಚಿಕೊಂಡರು. ‘ಬಾಹ್ಯಾಕಾಶದಿಂದ ಭಾರತವನ್ನು ಮೊದಲ ಬಾರಿಗೆ ನೋಡಿದಾಗ ಭವ್ಯವಾಗಿ ಮತ್ತು ನಕ್ಷೆಯಲ್ಲಿರುವುದಕ್ಕಿಂತ ದೊಡ್ಡದಾಗಿ ಕಂಡು ಬಂದಿತು. ಯಾವುದೇ ಗಡಿ ರೇಖೆಗಳಿಲ್ಲದೆ ಇಡೀ ಭೂಮಿ ನಮ್ಮ ಮನೆ ಮತ್ತು ನಾವೆಲ್ಲರೂ ಅದರ ನಾಗರಿಕರು ಎಂಬ ಏಕತೆಯ ಭಾವನೆ ಮೂಡುತ್ತದೆ’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.