ಶುಭಾಂಶು ಶುಕ್ಲಾ
ನವದೆಹಲಿ: ‘ಆ್ಯಕ್ಸಿಯಂ–4’ ಮಿಷನ್‌ನ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್‌ಎಸ್) ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಮೇಘಾಲಯ ಮತ್ತು ಅಸ್ಸಾಂನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ರೇಡಿಯೊ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಶುಕ್ಲಾ, ‘ನಿಮ್ಮಲ್ಲಿ ಹಲವರು ಭವಿಷ್ಯದ ಗಗನಯಾತ್ರಿಗಳಾಗಬಹುದು, ಚಂದ್ರನ ಮೇಲೆ ನಡೆಯಬಹುದು’ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಕೇಳಿದ 20 ಪ್ರಶ್ನೆಗಳಿಗೆ ಕೇವಲ 10 ನಿಮಿಷಗಳ ಅವಧಿಯಲ್ಲಿ ಶುಕ್ಲಾ ಉತ್ತರಿಸಿದ್ದು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಗಗನಯಾತ್ರಿಯಾಗಿ ತರಬೇತಿ ಮತ್ತು ಆರೋಗ್ಯದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
‘ನಾನು ಭೂಮಿಗೆ ವಾಪಸ್ ಆದ ಕೂಡಲೇ ನಿಮಗೆ ಮಾರ್ಗದರ್ಶನ ನೀಡುತ್ತೇನೆ. ನಿಮ್ಮಲ್ಲಿ ಹಲವರು ಭವಿಷ್ಯದ ಗಗನಯಾತ್ರಿಗಳಾಗುತ್ತೀರಿ. ಕುತೂಹಲದಿಂದಿರಿ, ಕಷ್ಟಪಟ್ಟು ಓದಿ ಮತ್ತು ನಿಮ್ಮ ಮೇಲೆ ನಂಬಿಕೆ ಇರಿಸಿ.. ನಿಮ್ಮಲ್ಲಿ ಯಾರಾದರೂ ಚಂದ್ರನ ಮೇಲೆ ನಡೆಯಬಹುದು’ ಎಂದು ಶುಕ್ಲಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.