ADVERTISEMENT

ಸೆಲ್ಫಿ ವಿಚಾರವಾಗಿ ಜಗಳ: ಗಾಯಕ ಸೋನು ನಿಗಮ್‌ ತಂಡದ ಮೇಲೆ ಮುಂಬೈನಲ್ಲಿ ದಾಳಿ

ಪಿಟಿಐ
Published 21 ಫೆಬ್ರುವರಿ 2023, 2:14 IST
Last Updated 21 ಫೆಬ್ರುವರಿ 2023, 2:14 IST
ಘಟನೆಯ ಚಿತ್ರ
ಘಟನೆಯ ಚಿತ್ರ    

ಮುಂಬೈ: ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಗಾಯಕ ಸೋನು ನಿಗಮ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಸೋನು ನಿಗಮ್‌ ಅವರ ಸಹೋದ್ಯೋಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೆಂಬೂರ್‌ನಲ್ಲಿ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ಸೋನು ನಿಗಮ್ ಪಾಲ್ಗೊಂಡಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಂಗೀತೋತ್ಸವದಿಂದ ಹೊರಡುವಾಗ ಗುಂಪೊಂದು ಸೆಲ್ಫಿಗಾಗಿ ಸೋನು ನಿಗಮ್‌ ಅವರ ಮೇಲೆ ಮುಗಿಬಿದ್ದಿದೆ. ಆಗ ಅವರ ಇಬ್ಬರು ಸಹೋದ್ಯೋಗಿಗಳು ಅಡ್ಡಬಂದಿದ್ದಾರೆ. ಆಗ ಅವರಿಬ್ಬರ ಮೇಲೂ ಹಲ್ಲೆ ನಡೆದಿದೆ. ಇಬ್ಬರ ಪೈಕಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಮಾಧ್ಯಮ ವರದಿಗಳ ಪ್ರಕಾರ, ಶಿವಸೇನಾದ (ಉದ್ಧವ್‌ ಠಾಕ್ರೆ ಬಣದ) ಸ್ಥಳೀಯ ಶಾಸಕರ ಮಗ ಸೋನು ನಿಗಮ್‌ ಮ್ಯಾನೇಜರ್‌ನೊಂದಿಗೆ ಅನುಚಿತವಾಗಿ ವರ್ತಿಸಿದ್ದೂ ಅಲ್ಲದೇ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ.

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಸೆಲ್ಫಿಗಾಗಿ ಕ್ರಿಕೆಟಿಗನ ಮೇಲೆ ನಡೆದಿತ್ತು ಹಲ್ಲೆ

ಸೆಲ್ಫಿ ವಿಚಾರವಾಗಿ ಕೆಲ ದಿನಗಳ ಹಿಂದೆ ಕ್ರಿಕೆಟಿಗ ಪೃಥ್ವಿ ಶಾ ಮೇಲೂ ಹಲ್ಲೆ ನಡೆದಿತ್ತು. ಸೆಲ್ಫಿ ನಿರಾಕರಿಸಿದ್ದಕ್ಕಾಗಿ ಪೃಥ್ವಿ ಶಾ ಅವರ ಮೇಲೆ ಭೋಜ್‌ಪುರಿ ನಟಿ ಸಪ್ನಾ ಗಿಲ್ ಎಂಬುವವರೂ ಸೇರಿದಂತೆ ಕೆಲ ಮಂದಿ ದಾಳಿ ಮಾಡಿದ್ದರು. ಹಣಕ್ಕಾಗಿ ಬೇಡಿಕೆಯನ್ನೂ ಇಟ್ಟಿದ್ದರು. ಈ ವಿಚಾರವಾಗಿ ನಟಿ ಸೇರಿದಂತೆ ಎಂಟು ಮಂದಿಯ ವಿರುದ್ಧ ಗಲಭೆ ಹಾಗೂ ಸುಲಿಗೆ ಪ್ರಕರಣದಡಿ ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ನಟಿ ಮತ್ತು ಮೂವರನ್ನು ಬಂಧಿಸಲಾಗಿತ್ತು. ಸದ್ಯ ನಾಲ್ವರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.