ADVERTISEMENT

SIR ಪ್ರಕ್ರಿಯೆಯು ನೋಟು ರದ್ದತಿಯಂತೇ ವಿಧ್ವಂಸಕ: ದೀಪಂಕರ್‌ ಭಟ್ಟಾಚಾರ್ಯ

ಪಿಟಿಐ
Published 24 ಸೆಪ್ಟೆಂಬರ್ 2025, 6:15 IST
Last Updated 24 ಸೆಪ್ಟೆಂಬರ್ 2025, 6:15 IST
<div class="paragraphs"><p>ದೀಪಂಕರ್‌ ಭಟ್ಟಾಚಾರ್ಯ</p></div>

ದೀಪಂಕರ್‌ ಭಟ್ಟಾಚಾರ್ಯ

   

–ಪಿಟಿಐ ಚಿತ್ರ

ಕೋಲ್ಕತ್ತ: ಕೇಂದ್ರ ಚುನಾವಣಾ ಆಯೋಗವು (ಸಿಇಸಿ) ಬಿಹಾರ ಮಾದರಿಯಲ್ಲಿ ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸಲು ಸೂಚನೆ ನೀಡಿರುವ ಬಗ್ಗೆ ಸಿಪಿಐ(ಎಂಎಲ್‌) ಪ್ರಧಾನ ಕಾರ್ಯದರ್ಶಿ ದೀಪಂಕರ್‌ ಭಟ್ಟಾಚಾರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಎಸ್‌ಐಆರ್‌ ಪ್ರಕ್ರಿಯೆಯು ನೋಟು ರದ್ದತಿಯಂತಹ ವಿಧ್ವಂಸಕ ಕಸರತ್ತಾಗಿದೆ. ಇದು ಸಾಮೂಹಿಕ ಮತದಾನದ ಹಕ್ಕು ನಿರಾಕರಣೆ ಮತ್ತು ಮತ ಕಳ್ಳತನಕ್ಕೆ ಕಾರಣವಾಗಬಹುದು’ ಎಂದು ‘ಪಿಟಿಐ’ಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

‘ಚುನಾವಣಾ ಆಯೋಗವು ಪೌರತ್ವವನ್ನು ನಿರ್ಣಯಿಸುವ ಸಂಸ್ಥೆಯಲ್ಲ. ಆದರೂ, 75 ವರ್ಷಗಳ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಪೌರತ್ವವನ್ನು ಸಾಬೀತುಪಡಿಸುವಂತೆ ಜನರಿಗೆ ಚುನಾವಣಾ ಆಯೋಗವು ಸೂಚಿಸಿದೆ. ಈ ರೀತಿ ಹಿಂದೆಂದೂ ನಡೆದಿರಲಿಲ್ಲ’ ಎಂದು ಅವರು ಟೀಕಿಸಿದ್ದಾರೆ.

’ಎಸ್‌ಐಆರ್‌ ಪ್ರಕ್ರಿಯೆ ನಡೆಸುವ ಮೂಲಕ ಚುನಾವಣಾ ಆಯೋಗವು ಸ್ಥಾಪಿತ ಚುನಾವಣಾ ಕಾರ್ಯವಿಧಾನಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಜತೆಗೆ, ಸಾರ್ವತ್ರಿಕ ಮತದಾನದ ಮನೋಭಾವವನ್ನೇ ಬುಡಮೇಲು ಮಾಡುತ್ತಿದೆ’ ಎಂದು ಭಟ್ಟಾಚಾರ್ಯ ಕಿಡಿಕಾರಿದ್ದಾರೆ.

ಬಿಹಾರದಲ್ಲಿ ಮಹಾಘಟಬಂಧನ್‌ ಮೈತ್ರಿಕೂಟದ ಭಾಗವಾಗಿರುವ ಸಿಪಿಐ (ಎಂಎಲ್‌) ಸೇರಿದಂತೆ ಇತರೆ ಪಕ್ಷಗಳ ತೀವ್ರ ವಿರೋಧದ ಹೊರತಾಗಿಯೂ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ.

‘ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದು ನಮ್ಮ ಪಕ್ಷದ ಮೇಲೂ ಪರಿಣಾಮ ಬೀರಲಿದೆ. ಜತೆಗೆ, ಎರಡು ಕೋಟಿ ಮತದಾರರು ಇದರಿಂದ ಪ್ರಭಾವಿತರಾಗಬಹುದು’ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.

ಬಿಜೆಪಿಗರು ಆರೋಪಿಸಿದಂತೆ ಬಿಹಾರದಲ್ಲಿ ಬಾಂಗ್ಲಾದೇಶ, ನೇಪಾಳ ಅಥವಾ ಮ್ಯಾನ್ಮಾರ್‌ನ ನುಸುಳುಕೋರರು ಮತದಾನದ ಹಕ್ಕು ಹೊಂದಿರುವ ಬಗ್ಗೆ ಪುರಾವೆಗಳಿಲ್ಲ ಎಂಬುದು ಚುನಾವಣಾ ಆಯೋಗದ ಅಂಕಿಅಂಶಗಳಿಂದ ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.