ADVERTISEMENT

SIR ಪ್ರಶ್ನಿಸಿ ಕೇರಳ ಸೇರಿ ಹಲವು ರಾಜ್ಯಗಳ ಅರ್ಜಿ: ECಗೆ ಸುಪ್ರೀಂ ಕೋರ್ಟ್ ನೋಟಿಸ್

ಪಿಟಿಐ
Published 21 ನವೆಂಬರ್ 2025, 9:03 IST
Last Updated 21 ನವೆಂಬರ್ 2025, 9:03 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಕೇರಳ, ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ‍‍‍ಪರಿಷ್ಕರಣೆ (ಎಸ್‌ಐಆರ್) ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.

ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ವಿವಿಧ ರಾಜಕೀಯ ನಾಯಕರು ಸಲ್ಲಿಸಿದ್ದ ಹೊಸ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಸ್‌ವಿಎನ್ ಭಟ್ಟಿ ಜಾಗೂ ಜೋಯ್ ಮಲ್ಯ ಬಾಗ್ಚಿ ಅವರಿದ್ದ ಪೀಠ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿತು.

ಕೇರಳದಲ್ಲಿ ಎಸ್‌ಐಆರ್ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಕೂಡ ನಿಗದಿಯಾಗಿವೆ. ಹೀಗಾಗಿ ಈ ಅರ್ಜಿಯನ್ನು ತುರ್ತಾಗಿ ಪರಿಗಣಿಸಬೇಕು ಎಂದು ಪೀಠಕ್ಕೆ ವಿನಂತಿ ಮಾಡಿಕೊಂಡರು.

ADVERTISEMENT

ಕೇರಳದಲ್ಲಿ ಎಸ್‌ಐಆರ್ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನವೆಂಬರ್ 26 ರಂದು ನಡೆಸುವುದಾಗಿ ಹೇಳಿದ ಕೋರ್ಟ್, ಉಳಿದ ರಾಜ್ಯಗಳ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಪಟ್ಟಿ ಮಾಡುವುದಾಗಿ ಹೇಳಿತು.

ದೇಶದಾದ್ಯಂತ ಎಸ್‌ಐಆರ್ ನಡೆಸುವ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ.

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪ್ರಶ್ನಿಸಿ ತಮಿಳುನಾಡಿನ ಡಿಎಂಕೆ ಹಾಗೂ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ನವೆಂಬರ್ 11ರಂದು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.