
ಸಹೋದರಿಯರಾದ ಶೋಭಾ, ವಿಮಲಾ
ಜೋಧ್‌ಪುರ: ಮದುವೆ ಮನೆ ಎಂದರೆ ಹಾಸ್ಯ, ಹಾಡು, ಸಂತಸ, ಸಂಭ್ರಮದ ಹೊನಲಿನಿಂದ ತುಂಬಿರಬೇಕಾದ ಕ್ಷಣಗಳು...ಮೆಹೆಂದಿ ಸುಗಂಧ, ಮಂಗಳ ವಾದ್ಯಗಳ ನಿನಾದದ ನಡುವೆ ಹೊಸ ಕನಸುಗಳೊಂದಿಗೆ ಬದುಕು ಕಟ್ಟಿಕೊಳ್ಳುವ ಸಂಭ್ರಮ.
ಆದರೆ ಇಂತಹ ಸಂತಸದ ಮನೆಯಲ್ಲಿ ಮದುವೆಯ ದಿನ ಸಹೋದರಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಸಂಭವಿಸಿದೆ. ಸಂತಸದ ಹೊನಲಿನಿಂದ ಬೆಳಗುತ್ತಿದ್ದ ಮನೆ ಕತ್ತಲೆಯಾಗಿ ಬದಲಾಗಿದೆ.
ರಾಜಸ್ಥಾನದ ಜೋಧಪುರದ ಮನಾಹಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಈ ದುರ್ಘಟನೆ ಗ್ರಾಮಸ್ಥರ ಮನಸ್ಸನ್ನೇ ಮರುಗಿಸಿದೆ.
ಅಕ್ಕ–ತಂಗಿಯರಾದ ಶೋಭಾ (25) ಮತ್ತು ವಿಮಲಾ (23) ಅವರ ಮದುವೆ ಶನಿವಾರ (ಫೆ.21)ದಂದು ನಿಶ್ಚಯವಾಗಿತ್ತು. ಶುಕ್ರವಾರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಮದುವೆ ಸಿದ್ಧತೆಗಳು ಮತ್ತು ಮೆಹಂದಿ ಶಾಸ್ತ್ರಗಳು ನಡೆದಿದ್ದವು. ತಡರಾತ್ರಿವರೆಗೂ ವಿವಿಧ ಮದುವೆ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದ ಸಹೋದರಿಯರು 2.30ಕ್ಕೆ ಮನೆಯ ಕೊಠಡಿಯಲ್ಲಿ ನಿದ್ರೆಗೆ ಜಾರಿದ್ದರು.
ಬೆಳಿಗ್ಗೆ 4 ಗಂಟೆ ಸುಮಾರಿಗೆ ಅಕ್ಕ–ತಂಗಿಯರ ಆರೋಗ್ಯ ಹದಗೆಟ್ಟ ಕಾರಣ ಕುಟುಂದವರು ತಕ್ಷಣಕ್ಕೆ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಇಬ್ಬರು ಮೃತಪಟ್ಟಿದ್ದಾರೆಂದು ದೃಢೀಕರಿಸಿದರು. ಮದುವೆ ಮಂಟಪ ಸಿದ್ಧವಾಗಬೇಕಿದ್ದ ಮನೆಯಲ್ಲಿ ರೋಧನೆ ಮತ್ತು ಕಣ್ಣೀರು ಮಾತ್ರ ಉಳಿದವು.
ನಂತರ ಮೃತದೇಹಗಳನ್ನು ಮನೆಗೆ ತಂದು ಅಂತ್ಯಕ್ರಿಯೆಗೆ ಕುಟುಂಬದರು ಸಿದ್ಧತೆ ಆರಂಭಿಸಿದ್ದರು. ಈ ವೇಳೆ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಂತ್ಯಕ್ರಿಯೆ ತಡೆದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಶವಗಾರಕ್ಕೆ ರವಾನಿಸಿದರು. ಪರೀಕ್ಷೆಯ ಬಳಿಕ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ಶೋಭಾ ಮತ್ತು ವಿಮಲಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ ನಿಖರ ಸಾವಿನ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸ್ಪಷ್ಟವಾಗಲಿದೆ. ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಹೆಚ್ಚುವರಿ ಪೊಲೀಸ್ ಉಪಆಯುಕ್ತ (ಎಡಿಸಿಪಿ) ರೋಷನ್ ಮೀನಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.