ADVERTISEMENT

ಮಗಳ ಅಪಹಾಸ್ಯ ಮಾಡಿದ ಸಹಪಾಠಿಗೆ ಇನ್‌ಸ್ಟಾಗ್ರಾಂ ಮೂಲಕ ಸ್ಮೃತಿ ಇರಾನಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 11:22 IST
Last Updated 22 ಜೂನ್ 2019, 11:22 IST
   

ನವದೆಹಲಿ: ಮಗಳನ್ನು ತರಗತಿಯಲ್ಲಿ ಅಪಹಾಸ್ಯ ಮಾಡಿದ ಆಕೆಯ ಸಹಪಾಠಿಗೆ ಸಚಿವೆ ಸ್ಮೃತಿ ಇರಾನಿ ಅವರು ಇನ್‌ಸ್ಟಾಗ್ರಾಂ ಪೋಸ್ಟರ್‌ ಮೂಲಕ ಎಚ್ಚರಿಕೆ ರವಾನಿಸಿದ್ದಾರೆ.

ಇತ್ತೀಚೆಗೆ ಸ್ಮೃತಿ ಇರಾನಿ ಅವರು ತಮ್ಮ ಮಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಅದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಈ ಸೆಲ್ಫಿ ಚಿತ್ರವನ್ನು ಮುಂದಿಟ್ಟುಕೊಂಡು ಮಗಳ ಸಹಪಾಠಿಯೊಬ್ಬ ತರಗತಿಯಲ್ಲಿ ಕೀಟಲೆ ಮಾಡಿದ್ದಾನೆ. ಈ ಕುರಿತು ಮಗಳು ಝೋಯಿಶ್‌ ಇರಾನಿ ಸ್ಮೃತಿ ಅವರಿಗೆದೂರಿದ್ದಾಳೆ. ಇದೇ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ಅವರು ಶುಕ್ರವಾರ ಚಿತ್ರವನ್ನು ಡಿಲಿಟ್‌ ಮಾಡಿದ್ದರಾದರೂ, ಇಂದು ಮತ್ತೊಮ್ಮೆ ಆಕೆಯ ಸೆಲ್ಫಿಚಿತ್ರವನ್ನು ಪ್ರಕಟಿಸಿ,ಅದರ ಜತೆಗೆ ಎಚ್ಚರಿಕೆಯ ಪಾಠವನ್ನೂ ಹೇಳಿದ್ದಾರೆ.

ಅವರು ಬರೆದುಕೊಂಡಿರುವುದು ಇಷ್ಟು...

ADVERTISEMENT

‘ನನ್ನ ಮಗಳ ಜತೆಗಿನ ಸೆಲ್ಫಿಯನ್ನು ನಾನು ನಿನ್ನೆ ನನ್ನ ಇನ್‌ಸ್ಟಾಗ್ರಾಂ ಅಕೌಂಟ್‌ನಿಂದ ಡಿಲಿಟ್‌ ಮಾಡಿದ್ದೆ. ಆ ಚಿತ್ರದಲ್ಲಿ ಅವಳು ಹೇಗೆ ಕಾಣುತ್ತಾಳೆ ಎಂಬುದನ್ನು ಅಪಹಾಸ್ಯ ಮಾಡಿ ಜಾ ಎಂಬಾತ ತರಗತಿಯಲ್ಲಿ ಅಣಕಿಸಿದ್ದಾನೆ. ಅಲ್ಲದೆ, ತನ್ನ ಅಭಿಪ್ರಾಯವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಹೀಗಾಗಿ ನನ್ನ ಮಗಳು ಚಿತ್ರವನ್ನು ಇನ್‌ಸ್ಟಾಗ್ರಾಂನಿಂದ ತೆಗೆಯುವಂತೆ ನನ್ನನ್ನು ಬೇಡಿಕೊಂಡಳು. ತರಗತಿಯಲ್ಲಿ ತನ್ನನ್ನು ರೇಗಿಸುತ್ತಿರುವುದಾಗಿ ತಿಳಿಸಿದಳು. ಅವಳು ಕಣ್ಣೀರಿಡುತ್ತಿರುವುದನ್ನು ನೋಡಲಾಗದೇ ನಾನು ಚಿತ್ರವನ್ನು ನಿನ್ನೆ ತೆಗೆದು ಹಾಕಿದ್ದೆ. ನಾನು ಹೀಗೆ ಮಾಡಿದರೆ, ಅವಳನ್ನು ರೇಗಿಸುತ್ತಿರುವವರನ್ನು ನಾನೇ ಬೆಂಬಲಿಸಿದಂತೆ ಆಗುತ್ತದೆ ಎಂದು ನನಗೆ ಈಗ ಅನಿಸಿತು. ಆದ್ದರಿಂದ ಜಾ, ಒಂದು ವಿಚಾರವನ್ನು ತಿಳಿದುಕೊ. ನನ್ನ ಮಗಳು ಒಬ್ಬ ಕ್ರೀಡಾಪಟು, ಲಿಮ್ಕಾ ಬುಕ್‌ನಲ್ಲಿ ದಾಖಲೆ ಬರೆದವಳು, ಕರಾಟೆಯಲ್ಲಿ ಅವರು ಬ್ಲಾಕ್‌ ಬೆಲ್ಟ್‌, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವಳು ಎರಡು ಬಾರಿ ಕಂಚಿನ ಪದಕವನ್ನೂ ಗೆದ್ದಿದ್ದಾಳೆ. ಅಷ್ಟೇ ಅಲ್ಲ ಅವಳು ನನ್ನ ಪ್ರೀತಿಯ ಮಗಳು. ಅಷ್ಟೇ ಸುಂದರಿಯೂ ಹೌದು. ಇದೆಲ್ಲವನ್ನೂ ಮೀರಿ ನೀನು ಅವಳನ್ನು ಗೇಲಿ ಮಾಡುವುದೇ ಆದರೆ, ಅವಳು ಅದನ್ನು ಎದುರಿಸಲು ಸಮರ್ಥಳಿದ್ದಾಳೆ. ಅವಳು ಜೋಯಿಶ್‌ ಇರಾನಿ. ಅವಳನ್ನು ಮಗಳಾಗಿ ಪಡೆಯಲು ನಾನು ಹೆಮ್ಮೆ ಪಡುತ್ತೇನೆ,’ ಎಂದು ಅವರು ಪೋಸ್ಟ್‌ ಪ್ರಕಟಿಸಿದ್ದಾರೆ.

ಸ್ಮೃತಿ ಇರಾನಿ ಮತ್ತು ಜುಬಿನ್‌ ಇರಾನಿ ದಂಪತಿಗೆ ಝೊಯಿಶ್‌ ಇರಾನಿ ಮತ್ತು ಜೋಹರ್‌ ಇರಾನಿ ಎಂಬ ಇಬ್ಬರು ಮಕ್ಕಳಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.