
ಸೋನಿಯಾ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ 79ನೇ ವಸಂತಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
'ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ಸಿಗಲಿ' ಎಂದು ಪ್ರಧಾನಿ ಮೋದಿ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ಸೋನಿಯಾ ಅವರಿಗೆ ದೀರ್ಘಾಯುಷ್ಯ ಹಾಗೂ ಆರೋಗ್ಯಕರ ಜೀವನವನ್ನು ಹಾರೈಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ದಮನಿತರ ದೃಢ ಚಾಂಪಿಯನ್ ಆಗಿರುವ ಅವರು, ಧೈರ್ಯ, ತ್ಯಾಗ, ಶಾಂತಚಿತ್ತತೆ ಮತ್ತು ನಿಸ್ವಾರ್ಥ ಸಮರ್ಪಣೆಯಿಂದ ಪ್ರತಿಯೊಂದು ಸವಾಲನ್ನು ಎದುರಿಸುವ ಸಂಕೇತವಾಗಿದ್ದಾರೆ' ಎಂದು ಹೇಳಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸೋನಿಯಾ ಗಾಂಧಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. 'ಕಾಂಗ್ರೆಸ್ ಪಕ್ಷದ ವರಿಷ್ಠರು, ನಮ್ಮೆಲ್ಲರ ಮಾರ್ಗದರ್ಶಕರು ಆದ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೀರ್ಘ ಆಯಸ್ಸು, ಆರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಮನದುಂಬಿ ಹಾರೈಸುತ್ತೇನೆ' ಎಂದು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ನಮ್ಮ ನಿರಂತರ ಬೆಂಬಲದ ಆಧಾರಸ್ತಂಭ' ಎಂದು ಸೋನಿಯಾ ಗಾಂಧಿ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದ್ದಾರೆ. 'ನಿಮ್ಮ ನಿಸ್ವಾರ್ಥ ಸೇವೆ ಹಾಗೂ ದೂರದೃಷ್ಟಿಯು ಕಾಂಗ್ರೆಸ್ ಪಕ್ಷವನ್ನು ರೂಪಿಸಿದ್ದು, ಜನರಿಗೆ ಸೇವೆ ಸಲ್ಲಿಸು ನಮ್ಮ ಸಂಕಲ್ಪವನ್ನು ದೃಢಪಡಿಸಿದೆ ಎಂದಿದ್ದಾರೆ. ನಮಗೆ ನೀವು ತೋರಿರುವ ಮಾರ್ಗದರ್ಶನ ಹಾಗೂ ನಂಬಿಕೆಗೆ ತುಂಬಾ ಕೃತಜ್ಞನಾಗಿದ್ದೇನೆ' ಎಂದು ಹುಟ್ಟುಹಬ್ಬದ ಸಂದೇಶದಲ್ಲಿ ಡಿಕೆಶಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.