ADVERTISEMENT

ಖಮೇನಿ ಸಾವಿಗೆ ಮೋದಿ ಸರ್ಕಾರದ ಮೌನ ತಟಸ್ಥ ಧೋರಣೆಯಲ್ಲ, ತಿರಸ್ಕಾರ: ಸೋನಿಯಾ

ಪಿಟಿಐ
Published 3 ಮಾರ್ಚ್ 2026, 6:14 IST
Last Updated 3 ಮಾರ್ಚ್ 2026, 6:14 IST
   

ನವದೆಹಲಿ: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಕುರಿತು ನರೇಂದ್ರ ಮೋದಿ ಸರ್ಕಾರದ ಮೌನವನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ತೀವ್ರವಾಗಿ ಟೀಕಿಸಿದ್ದಾರೆ.

'ದಿ ಇಂಡಿಯನ್ ಎಕ್ಸ್‌ಪ್ರೆಸ್‌’ನಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ, ‘‌ಈ ವಿಷಯದಲ್ಲಿ ಸರ್ಕಾರದ ‘ಆತಂಕಕಾರಿ’ ಮೌನದ ಕುರಿತು ಬಜೆಟ್‌ ಅಧಿವೇಶದನ ಎರಡನೇ ಅವಧಿಯಲ್ಲಿ ಮುಕ್ತವಾಗಿ ಚರ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಸರ್ಕಾರದ ಈ ನಡೆಯು ತಟಸ್ಥ ಧೋರಣೆಯಲ್ಲ, ಬದಲಿಗೆ ತಿರಸ್ಕಾರವಾಗಿದೆ. ಇದು ಭಾರತದ ವಿದೇಶಾಂಗ ನೀತಿಯ ದಿಕ್ಕು ಹಾಗೂ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಸಂಶಯಗಳನ್ನು ಮೂಡಿಸಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಸಂಧಾನ ಮಾತುಕತೆಗಳು ನಡೆಯುತ್ತಿರುವ ಮಧ್ಯೆಯೇ ಸಾರ್ವಭೌಮ ದೇಶದ ಮುಖ್ಯಸ್ಥರೊಬ್ಬರ ಹತ್ಯೆಯು ಸಮಕಾಲೀನ ಅಂತರರಾಷ್ಟ್ರೀಯ ಸಂಬಂಧಗಳಲ್ಲಿನ ಗಂಭೀರ ಬಿರುಕನ್ನು ಸೂಚಿಸುತ್ತದೆ. ಈ ಹತ್ಯೆಯನ್ನು ಖಂಡಿಸುವುದರಿಂದ ಭಾರತ ಸರ್ಕಾರ ದೂರ ಉಳಿದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಆರಂಭದಲ್ಲಿ, ಅಮೆರಿಕ-ಇಸ್ರೇಲ್ ನಡೆಸಿದ ಬೃಹತ್ ದಾಳಿಯನ್ನು ನಿರ್ಲಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅದಕ್ಕೂ ಮೊದಲು ನಡೆದ ಘಟನೆಗಳ ಸರಮಾಲೆಯನ್ನು ಪ್ರಸ್ತಾಪಿಸದೆ ಕೇವಲ ಯುಎಇ ಮೇಲಿನ ಇರಾನ್‌ನ ಪ್ರತೀಕಾರದ ದಾಳಿಯನ್ನು ಖಂಡಿಸುವುದಕ್ಕೆ ಸೀಮಿತರಾದರು‘ ಎಂದು ಕಿಡಿಕಾರಿದ್ದಾರೆ.

‘ವಿದೇಶಿ ನಾಯಕರೊಬ್ಬರ ಉದ್ದೇಶಿತ ಹತ್ಯೆಯ ಸಂದರ್ಭದಲ್ಲಿ ನಮ್ಮ ದೇಶವು ಅಂತರರಾಷ್ಟ್ರೀಯ ಕಾನೂನಿನ ರಕ್ಷಣೆಗೆ ನಿಲ್ಲದಿದ್ದಾಗ ಅದು ನಮ್ಮ ವಿದೇಶಾಂಗ ನೀತಿಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತದೆ’ ಎಂದು ಅವರು ತಮ್ಮ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.