ADVERTISEMENT

ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ: ಇಂಧನ ಬೆಲೆ ಏರಿಕೆ ವಿರುದ್ಧ ಸೋನಿಯಾ ಕಿಡಿ

ಪಿಟಿಐ
Published 29 ಜೂನ್ 2020, 10:17 IST
Last Updated 29 ಜೂನ್ 2020, 10:17 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಇಂಧನ ದರ ಏರಿಕೆ ಮೂಲಕ ಕೇಂದ್ರ ಸರ್ಕಾರವು ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಲಾಕ್‌ಡೌನ್‌ ಬಳಿಕ 22 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅವರು, ಬೆಲೆ ಏರಿಕೆ ನಿರ್ಧಾರವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಜನರ ವೆಚ್ಚದ ಮೂಲಕ ಸರ್ಕಾರ ಲಾಭ ಗಳಿಸಲು ಹೊರಟಿದೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವು ಜನರಿಗೆ ನೆರವಾಗುವುದು ಬಿಟ್ಟು ಅವರು ಕಷ್ಟ‍ಪಟ್ಟು ಸಂಪಾದಿಸಿದ ಹಣದಿಂದ ಲಾಭ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ದೇಶದಾದ್ಯಂತ ಹಮ್ಮಿಕೊಂಡಿರುವ, ‘ಇಂಧನ ದರ ಏರಿಕೆ ವಿರುದ್ಧ ದನಿಯೆತ್ತಿ’ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದೆಡೆ ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಜನ ಸಂಕಷ್ಟಕ್ಕೆ ಸಿಲುಕಿರುವಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಜೀವನವನ್ನು ಮತ್ತಷ್ಟು ಕಷ್ಟಕರವಾಗಿಸಿದೆ ಎಂದು ಹೇಳಿದ್ದಾರೆ.

ADVERTISEMENT

ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕಾಂಗ್ರೆಸ್ ಇಂದು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ.

ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಸಾಮಾಜಿಕ ಮಾಧ್ಯಗಳಲ್ಲಿ ಅಭಿಯಾನದಲ್ಲಿ ಭಾಗಿಯಾಗಿದ್ದು, ಇಂಧನ ದರ ಕಡಿಮೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

‘ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವುದನ್ನು ಹಿಂಪಡೆಯುವಂತೆ ಕಾಂಗ್ರೆಸ್‌ ಪಕ್ಷದವರು ಮತ್ತು ಇತರರ ಜತೆಗೂಡಿ ನಾನು ಮೋದಿ ಸರ್ಕಾರವನ್ನು ಆಗ್ರಹಿಸುತ್ತಿದ್ದೇನೆ’ ಎಂದು ಸೋನಿಯಾ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.