ಮುಂಬೈ: ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಹಾಗೂ ಶಿವಸೇನೆ (ಶಿಂದೆ ಬಣ) ಮುಖ್ಯಸ್ಥ ಏಕನಾಥ ಶಿಂದೆ ಅವರು ನೂತನ ‘ಮಹಾಯುತಿ’ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಂಡಂತೆ ತೋರುತ್ತಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ದೇವೇಂದ್ರ ಫಡಣವೀಸ್ ಹೆಸರು ಮುಂಚೂಣಿಯಲ್ಲಿದ್ದು, ಅವರು ನೂತನ ಸರ್ಕಾರಕ್ಕೆ ‘ಅಂತಿಮ ಸ್ಪರ್ಶ’ ನೀಡುವ ನಿಟ್ಟಿನಲ್ಲಿ ಸರಣಿ ಸಭೆ ನಡೆಸಿದ್ದಾರೆ.
ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಸೋಮವಾರ ಮತ್ತು ಮಂಗಳವಾರ ನವದೆಹಲಿಯಲ್ಲಿದ್ದುಕೊಂಡು, ಬಿಜೆಪಿ ವರಿಷ್ಠರ ಜತೆ ಮಾತುಕತೆ ನಡೆಸಿದ್ದಾರೆ. ನೂತನ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ಪಡೆಯಲು ಎನ್‌ಸಿಪಿ ಮತ್ತು ಶಿವಸೇನೆ ತೀವ್ರ ಕಸರತ್ತು ನಡೆಸಿವೆ.
ಫಡಣವೀಸ್ ಅವರು ಮಂಗಳವಾರ ರಾತ್ರಿ, ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಶಿಂದೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕಳೆದ ವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಇವರಿಬ್ಬರು ಭೇಟಿಯಾಗಿದ್ದು ಇದೇ ಮೊದಲು.
ನವದೆಹಲಿಯಿಂದ ಬಂದ ಬಳಿಕ ಸತಾರಾದಲ್ಲಿನ ಗ್ರಾಮಕ್ಕೆ ತೆರಳಿದ್ದ ಶಿಂದೆ, ಅಲ್ಲಿಂದ ಠಾಣೆಯ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದಿದ್ದರು.
ಫಡಣವೀಸ್ ಆಪ್ತರೂ ಆಗಿರುವ ಶಾಸಕ ಗಿರೀಶ್ ಮಹಾಜನ್ ಅವರು ಸೋಮವಾರ ರಾತ್ರಿ ಶಿಂದೆ ಅವರನ್ನು ಭೇಟಿಯಾಗಿ, ನೂತನ ಸರ್ಕಾರದ ಭಾಗವಾಗಲು ಮತ್ತು ಉಪ ಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಳ್ಳುವಂತೆ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಮಾರಂಭಕ್ಕೆ ಭರದ ಸಿದ್ಧತೆ: ನೂತನ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗದಿದ್ದರೂ, ಡಿಸೆಂಬರ್ 5ರಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಜಾದ್ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
ಗುರುವಾರ ಸಂಜೆ 5.30ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಫಡಣವೀಸ್ ಅವರು ಮುಖ್ಯಮಂತ್ರಿಯಾಗಿ ಹಾಗೂ ಶಿಂದೆ ಮತ್ತು ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬುಧವಾರ ನಿಗದಿಯಾಗಿದ್ದು, ನೂತನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆಬೀಳಲಿದೆ.
ದಿನದ ಬೆಳವಣಿಗೆ
ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಶಿಂದೆ ಭೇಟಿಯಾದ ಫಡಣವೀಸ್
ತಮ್ಮ ನಿವಾಸದಲ್ಲಿ ಬಿಜೆಪಿ ಮುಖಂಡರು ಸಚಿವ ಸ್ಥಾನದ ಆಕಾಂಕ್ಷಿಗಳ ಜತೆ ಫಡಣವೀಸ್ ಸರಣಿ ಸಭೆ
ಪ್ರಮಾಣ ವಚನ ಸಮಾರಂಭದ ಸಿದ್ಧತೆ ಪರಿಶೀಲಿಸಿದ ‘ಮಹಾಯುತಿ’ ನಾಯಕರು
ಮಂಗಳವಾರವೂ ನವದೆಹಲಿಯಲ್ಲಿ ಬಿಜೆಪಿ ವರಿಷ್ಠರ ಜತೆ ಅಜಿತ್ ಪವಾರ್ ಮಾತುಕತೆ
ಶಿಂದೆ ಆರೋಗ್ಯ ತಪಾಸಣೆ
ಹಂಗಾಮಿ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮಂಗಳವಾರ ಠಾಣೆಯ ಜುಪಿಟರ್ ಆಸ್ಪತ್ರೆಯಲ್ಲಿ ಅರೋಗ್ಯ ತಪಾಸಣೆ ಮಾಡಿಸಿಕೊಂಡರು. ‘ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದೇನೆ. ನನ್ನ ಆರೋಗ್ಯ ಚೆನ್ನಾಗಿಯೇ ಇದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.