
ಚೆನ್ನೈ: ‘370ನೇ ವಿಧಿಯನ್ನು ರದ್ದುಗೊಳಿಸುವಲ್ಲಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮಸೂದೆಗಳನ್ನು ಅಂಗೀಕರಿಸುವಲ್ಲಿ ಇದ್ದ ಆಸಕ್ತಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸುವಲ್ಲಿ ಯಾಕೆ ಇಲ್ಲ? ಚುನಾಣೆಯಲ್ಲಿ ಸೋಲುವ ಭೀತಿಯಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದಕ್ಕೆ ತರಲಾಗಿದೆ. ಇದೊಂದು ಚುನಾವಣಾ ಗಿಮಿಕ್ ಆಗಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸ್ಟಾಲಿನ್, ‘ಮಹಿಳಾ ಮೀಸಲಾತಿ ಮಸೂದೆಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಸಮರ್ಪಕ ಮೀಸಲಾತಿ ನೀಡುವುದನ್ನು ಖಾತ್ರಿಪಡಿಸಬೇಕು ಮತ್ತು ಕ್ಷೇತ್ರ ಪುನರ್ ವಿಂಗಡಣೆಯು ಜನಸಂಖ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಿದ ತಮಿಳುನಾಡು ಮತ್ತು ಇಡೀ ದಕ್ಷಿಣ ಭಾರತದ ರಾಜ್ಯಗಳ ಜನರಿಗೆ ಯಾವುದೇ ನಷ್ಟ ಮಾಡುವುದಿಲ್ಲ ಎಂದು ಭರವಸೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
‘2029ರಲ್ಲಿ ಜಾರಿಗೆ ಬರಲಿದೆ ಎಂದು ಹೇಳಲಾದ ಯಾವುದೋ ಒಂದು ಮಸೂದೆಯನ್ನು ಈಗಲೇ ಅಂಗೀಕರಿಸುವುದು ಒಂದು ಅಪರೂಪದ ತಂತ್ರವಾಗಿದೆ. ಅದು ಜಾರಿಯಾಗುವುದು ಇನ್ನು ನಡೆಯಬೇಕಿರುವ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿದ ನಂತರ. ಇದಕ್ಕೂ ಯಾವುದೇ ಕಾಲ ಮಿತಿಯಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.
ಕ್ಷೇತ್ರ ಪುನರ್ ವಿಂಗಡಣೆ ದಕ್ಷಿಣ ಭಾರತದ ತಲೆಯ ಮೇಲೆ ನೇತಾಡುವ ಕತ್ತಿ
‘ಕ್ಷೇತ್ರ ಪುನರ್ ವಿಂಗಡಣೆ ಎನ್ನುವುದು ತಮಿಳುನಾಡು ಮತ್ತು ದಕ್ಷಿಣ ಭಾರತದ ತಲೆಯ ಮೇಲೆ ನೇತಾಡುವ ಡಮೋಕ್ಲಿಸ್ ಕತ್ತಿಯಿದ್ದಂತೆ. ದಕ್ಷಿಣ ಭಾರತದ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ರಾಜಕೀಯ ಪಿತೂರಿಯನ್ನು ನಾವು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕಿದೆ’ ಎಂದು ಸ್ಟಾಲಿನ್ ಹೇಳಿದರು.
‘ಕಳೆದ ಒಂಬತ್ತು ವರ್ಷಗಳಿಂದ ಮಹಿಳಾ ಮೀಸಲಾತಿ ಮಸೂದೆ ಕುರಿತು ಅಸಡ್ಡೆ ತೋರಿದ ಬಿಜೆಪಿ, ಇದೀಗ ಮಸೂದೆಯನ್ನು ಜಾರಿಗೆ ತರಲು ಹೊರಟಿದೆ. ರಾಜಕೀಯ ಸ್ಟಂಟ್ ಮೂಲಕ ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದೆ. ಇದನ್ನು ಜನರು ಅರ್ಥಮಾಡಿಕೊಳ್ಳಬೇಕು’ ಎಂದರು
‘ಮಹಿಳಾ ಮೀಸಲಾತಿ ಮಸೊದೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಕ್ಷೇತ್ರ ಪುನರ್ ವಿಂಗಡಣೆ ಹೆಸರಿನಲ್ಲಿ ದಕ್ಷಿಣ ಭಾರತದ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಏನೂ ನಡೆಯುವುದಿಲ್ಲ ಎಂಬ ಆತಂಕವನ್ನು ಪ್ರಧಾನಿ ನರೇಂದ್ರ ಮೋದಿ ಹೋಗಲಾಡಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.