ADVERTISEMENT

ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಿಸಿ: ಬಾಂಗ್ಲಾ ಸರ್ಕಾರಕ್ಕೆ RSS ಮನವಿ

ಪಿಟಿಐ
Published 30 ನವೆಂಬರ್ 2024, 10:39 IST
Last Updated 30 ನವೆಂಬರ್ 2024, 10:39 IST
<div class="paragraphs"><p>ಇಸ್ಕಾನ್ ಸನ್ಯಾಸಿ ಚಿನ್ಮಯಿ ಕೃಷ್ಣದಾಸ್ ಅವರನ್ನು ಬಾಂಗ್ಲಾ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದರು</p></div>

ಇಸ್ಕಾನ್ ಸನ್ಯಾಸಿ ಚಿನ್ಮಯಿ ಕೃಷ್ಣದಾಸ್ ಅವರನ್ನು ಬಾಂಗ್ಲಾ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದರು

   

––ರಾಯಿಟರ್ಸ್ ಚಿತ್ರ

ನವದೆಹಲಿ: ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು ಮತ್ತು ಇಸ್ಕಾನ್ ಸನ್ಯಾಸಿ ಚಿನ್ಮಯಿ ಕೃಷ್ಣದಾಸ್ ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡುವಂತೆ ಬಾಂಗ್ಲಾದೇಶದ ಹಂಗಾಮಿ ಸರ್ಕಾರಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಒತ್ತಾಯಿಸಿದೆ.

ADVERTISEMENT

‘ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಡೆಯಲು ಕೇಂದ್ರ ಸರ್ಕಾರವು ತನ್ನ ಪ್ರಯತ್ನಗಳನ್ನು ಮುಂದುವರಿಸಬೇಕು. ಜತೆಗೆ, ಸಾಧ್ಯವಾದಷ್ಟು ಬೇಗ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಜಾಗತಿಕ ಅಭಿಪ್ರಾಯವನ್ನು ಮೂಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಮನವಿ ಮಾಡಿದ್ದಾರೆ.

‘ಬಾಂಗ್ಲಾದೇಶದಲ್ಲಿ ಹಿಂದೂಗಳು, ಮಹಿಳೆಯರು ಸೇರಿದಂತೆ ಇತರ ಅಲ್ಪಸಂಖ್ಯಾತರ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳು ನಡೆಸುತ್ತಿರುವ ದಾಳಿಗಳು, ಅಮಾನವೀಯ ದೌರ್ಜನ್ಯಗಳು ಅತ್ಯಂತ ಕಳವಳಕಾರಿಯಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಇದನ್ನು ತೀವ್ರವಾಗಿ ಖಂಡಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವ ಬದಲು ಈಗಿನ ಬಾಂಗ್ಲಾ ಸರ್ಕಾರ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ. ಅಲ್ಲದೆ ಹಿಂದೂಗಳ ಧ್ವನಿಯನ್ನು ಅಡಗಿಸಲು ಅನ್ಯಾಯ ಮತ್ತು ದೌರ್ಜನ್ಯದ ಮಾರ್ಗವನ್ನು ಸರ್ಕಾರವೇ ಬೆಂಬಲಿಸುತ್ತಿದೆ’ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಬಾಂಗ್ಲಾದೇಶದ ‘ಸಮ್ಮಿಲಿತ್‌ ಸನಾತನಿ ಜಾಗರಣ ಜೋತೆ’ ಹಿಂದೂ ಸಂಘಟನೆಯ ವಕ್ತಾರ ಚಿನ್ಮಯಿ ಕೃಷ್ಣದಾಸ್‌ ಅವರನ್ನು ದೇಶದ್ರೋಹದ ಆರೋಪದಲ್ಲಿ ಸೋಮವಾರ ಢಾಕಾದ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಮಂಗಳವಾರ ಇವರ ಜಾಮೀನು ಅರ್ಜಿಯನ್ನು ಚಟ್ಟೋಗ್ರಾಮ ನ್ಯಾಯಾಲಯವು ತಿರಸ್ಕರಿಸಿ, ಜೈಲಿಗೆ ಕಳುಹಿಸಿತ್ತು.

ಇದರ ಬೆನ್ನಲ್ಲೇ ಚಿನ್ಮಯಿ ಕೃಷ್ಣದಾಸ್‌ ಬ್ರಹ್ಮಚಾರಿ ಸೇರಿದಂತೆ ಇಸ್ಕಾನ್‌ ಜತೆ ಗುರುತಿಸಿಕೊಂಡಿರುವ 17 ಮಂದಿಯ ಬ್ಯಾಂಕ್ ಖಾತೆಗಳನ್ನು 30 ದಿನಗಳವರೆಗೆ ಸ್ಥಗಿತಗೊಳಿಸುವಂತೆ ಬಾಂಗ್ಲಾದೇಶದ ಹಣಕಾಸು ಅಧಿಕಾರಿಗಳು ಆದೇಶಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.