ನವದೆಹಲಿ: ಖೈಬರ್ ಪಖ್ತುಂಖ್ವಾದ ಉತ್ತರ ವಜೀರಿಸ್ತಾನ ಜಿಲ್ಲೆಯಲ್ಲಿ ಶನಿವಾರ (ಜೂನ್ 28 ರಂದು) ನಡೆದ ಆತ್ಮಾಹುತಿ ಬಾಂಬ್ ದಾಳಿಯ ಹೊಣೆ ಹೊರಿಸಲು ಯತ್ನಿಸಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.
ಪಾಕಿಸ್ತಾನ – ಅಫ್ಗಾನಿಸ್ತಾನ ಗಡಿ ಜಿಲ್ಲೆ ವಜೀರಿಸ್ತಾನದ ಮಿರ್ ಆಲಿ ಪ್ರದೇಶದಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಸ್ಫೋಟಕ ತುಂಬಿದ ಕಾರನ್ನು ಉಗ್ರರು ಪಾಕ್ ಸೇನಾ ಬೆಂಗಾವಲು ಪಡೆಯ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ, ಕನಿಷ್ಠ 13 ಯೋಧರು ಮೃತಪಟ್ಟು, ನಾಗರಿಕರೂ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಉಸುದ್ ಅಲ್–ಹರ್ಬ್ ಸಂಘಟನೆ ಕೃತ್ಯದ ಹೊಣೆ ಹೊತ್ತುಕೊಂಡಿದೆ.
ಆದರೆ ದಾಳಿಯ ಹಿಂದೆ ಭಾರತದ ಪಾತ್ರವಿದೆ ಎಂದು ಪಾಕ್ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ವಿದೇಶಾಂಗ ಸಚಿವಾಲಯ, 'ವಜೀರಿಸ್ತಾನದಲ್ಲಿ ಜೂನ್ 28ರಂದು ನಡೆದಿರುವ ದಾಳಿಗೆ ಸಂಬಂಧಿಸಿದಂತೆ ಭಾರತವನ್ನು ದೂಷಿಸಲು ಯತ್ನಿಸಿರುವ ಪಾಕಿಸ್ತಾನ ಸೇನೆಯ ಅಧಿಕೃತ ಹೇಳಿಕೆಯನ್ನು ಗಮನಿಸಿದ್ದೇವೆ. ಪಾಕ್ ಆರೋಪವು ತಿರಸ್ಕಾರಕ್ಕೆ ಅರ್ಹವಾಗಿದೆ' ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.