ADVERTISEMENT

ರಾಷ್ಟ್ರೀಯ ಉದ್ಯಾನಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ: ಸುಪ್ರೀಂ

ಪಿಟಿಐ
Published 13 ನವೆಂಬರ್ 2025, 15:57 IST
Last Updated 13 ನವೆಂಬರ್ 2025, 15:57 IST
<div class="paragraphs"><p>ಗಣಿಗಾರಿಕೆ</p></div>

ಗಣಿಗಾರಿಕೆ

   

ನವದೆಹಲಿ: ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸುವುದನ್ನು ಸುಪ್ರೀಂ ಕೋರ್ಟ್ ಗುರುವಾರ ನಿಷೇಧಿಸಿದೆ.

‘ರಾಷ್ಟ್ರೀಯ ಉದ್ಯಾನಗಳು ಹಾಗೂ ಅಭಯಾರಣ್ಯಗಳ ಒಳಗೆ ಮತ್ತು ಅಂತಹ ಸಂರಕ್ಷಿತ ಪ್ರದೇಶಗಳ ಗಡಿಯಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಅನುಮತಿಸಬಾರದು ಎಂದು ನಾವು ನಿರ್ದೇಶಿಸುತ್ತೇವೆ’ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ.ವಿನೋದ ಚಂದ್ರನ್ ಅವರ ಪೀಠ ಹೇಳಿದೆ.

ADVERTISEMENT

‘ಸಂರಕ್ಷಿತ ಪ್ರದೇಶದ ಒಂದು ಕಿ.ಮೀ ವ್ಯಾಪ್ತಿಯೊಳಗೆ ಗಣಿಗಾರಿಕೆ ಚಟುವಟಿಕೆಗಳು ವನ್ಯಜೀವಿಗಳಿಗೆ ಅಪಾಯಕಾರಿ ಎಂಬುದನ್ನು ಈ ನ್ಯಾಯಾಲಯ ಮನಗಂಡಿದೆ. ಈ ಹಿಂದೆ ಗೋವಾ ಫೌಂಡೇಶನ್ ಪ್ರಕರಣದಲ್ಲಿ, ಗೋವಾ ರಾಜ್ಯಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ನಿರ್ದೇಶನಗಳನ್ನು ನೀಡಲಾಗಿದೆ. ಇದೀಗ ಇಡೀ ದೇಶಕ್ಕೆ ಅನ್ವಯವಾಗುವಂತೆ ಅಂತಹ ನಿರ್ದೇಶನ ನೀಡುತ್ತಿದ್ದೇವೆ’ ಎಂದಿತು.

ಜಾರ್ಖಂಡ್‌ನ ಸಾರಂಡಾ ಅಭಯಾರಣ್ಯ ಮತ್ತು ಸಾಸಂಗದಾಬುರು ಅರಣ್ಯ ಪ್ರದೇಶಗಳನ್ನು ಮೀಸಲು ಅರಣ್ಯ ಪ್ರದೇಶವಾಗಿ ಘೋಷಿಸುವ ಅಧಿಸೂಚನೆಗೆ ಸಂಬಂಧಿಸಿದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಈ ಪ್ರದೇಶಗಳನ್ನು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸುವಂತೆ ಸುಪ್ರೀಂ ಕೋರ್ಟ್, ಜಾರ್ಖಂಡ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅರಣ್ಯ ಹಕ್ಕುಗಳ ಕಾಯ್ದೆಯಡಿ ಈ ಪ್ರದೇಶದ ಬುಡಕಟ್ಟು ಜನರು ಮತ್ತು ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ಜಾರ್ಖಂಡ್ ಸರ್ಕಾರಕ್ಕೆ ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.