ADVERTISEMENT

ಸುಸ್ತಿದಾರರ ವಿವರ ಬಹಿರಂಗಪಡಿಸಿ: ಆರ್‌ಬಿಐಗೆ ಸುಪ್ರೀಂಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 7:36 IST
Last Updated 26 ಏಪ್ರಿಲ್ 2019, 7:36 IST
   

ನವದೆಹಲಿ: ಸುಸ್ತಿದಾರರ ವಿವರ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕುಗಳ ತಪಾಸಣಾ ವರದಿಗಳನ್ನು ಬಹಿರಂಗಪಡಿಸಿ ಎಂದು ಸುಪ್ರೀಂಕೋರ್ಟ್ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಆದೇಶಿಸಿದೆ.

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕಾರ್ಯಕರ್ತ ಸುಭಾಶ್ ಚಂದ್ರ ಅಗರವಾಲ್ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗೇಶ್ವರ ರಾವ್ ಮತ್ತು ಎಂಆರ್ ಶಾ ಅವರ ನ್ಯಾಯಪೀಠ ಆರ್‍‌ಬಿಐಗೆ ಈ ನಿರ್ದೇಶನ ನೀಡಿದೆ.

ಆರ್‌ಟಿಐ ಕಾಯ್ದೆ ಪ್ರಕಾರ ಸುಸ್ತಿದಾರರ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಕೇಳಿಕೊಂಡಾಗ ಆರ್‌ಬಿಐ ಮತ್ತು ಆರ್‌ಬಿಐ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಉದ್ದೇಶ ಪೂರ್ವಕವಾಗಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಅಗರ್‌ವಾಲ್ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.

ADVERTISEMENT

ಏಪ್ರಿಲ್ 2011ರಿಂದ ಡಿಸೆಂಬರ್ 2015ರ ವರೆಗೆ ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಪಾಸಣಾ ವರದಿಗಳ ಪ್ರತಿಯನ್ನು ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಅಗರವಾಲ್ 2015 ಡಿಸೆಂಬರ್‌ನಲ್ಲಿ ಆರ್‌ಟಿಐ ಮೂಲಕ ಮಾಹಿತಿಗಾಗಿ ಮನವಿ ಸಲ್ಲಿಸಿದ್ದರು.

ಅಗರವಾಲ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪಾರದರ್ಶಕತೆಯ ವಿಚಾರದಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದಿದೆ.

ಆರ್​ಟಿಐ ಅಡಿ ಈ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್​ ಈ ಹಿಂದೆಯೇ ಆರ್​ಬಿಐಗೆ ಸೂಚನೆ ನೀಡಿತ್ತು. ಆದರೆ, ಆರ್​ಬಿಐ ಅದನ್ನು ಇಲ್ಲಿವರೆಗೆ ಪಾಲಿಸಿರಲಿಲ್ಲ. ಆದ್ದರಿಂದ, ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಸುಪ್ರೀಂಕೋರ್ಟ್ ಆರ್‌ಬಿಐಗೆ ಖಡಕ್ ಎಚ್ಚರಿಕೆ ನೀಡಿದೆ.

ಈ ಹಿಂದೆ ದೇಶದ ಸಹಕಾರಿ ಬ್ಯಾಂಕ್‌ಗಳ ಲೆಕ್ಕ ತಪಾಸಣಾ ವರದಿಯ ವಿವರವನ್ನು ಸಾರ್ವಜನಿಕರಿಗೆ ಬಹಿರಂಗಗೊಳಿಸುವಂತೆ ಕೇಂದ್ರ ಮಾಹಿತಿ ಆಯೋಗವು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.