ADVERTISEMENT

ಪಾಕ್ ಜತೆ ವಿಡಿಯೊ, ಮಹತ್ವದ ಮಾಹಿತಿ ಹಂಚಿಕೊಳ್ಳುತ್ತಿದ್ದ ಶಂಕಿತ ಗೂಢಚಾರಿ ಬಂಧನ

ಪಿಟಿಐ
Published 11 ಅಕ್ಟೋಬರ್ 2021, 5:22 IST
Last Updated 11 ಅಕ್ಟೋಬರ್ 2021, 5:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಮ್ಮು: ಪಾಕಿಸ್ತಾನ ಮೂಲದ ವ್ಯಕ್ತಿಗಳೊಂದಿಗೆ ವಿಡಿಯೊ ಸಹಿತ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡ ಆರೋಪದ ಮೇರೆಗೆ ಉತ್ತರ ಪ್ರದೇಶದ ಶಂಕಿತ ಗೂಢಾಚಾರಿಯನ್ನು ಭಾನುವಾರ ಇಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಇಲ್ಲಿನ ಗಾಂಧಿನಗರ ಪ್ರದೇಶದಿಂದ ಆತನನ್ನು ಬಂಧಿಸಿದ್ದು, ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ ಲಭ್ಯವಾದ ಮಾಹಿತಿ ಪ್ರಕಾರ, ಬಂಧಿತ ವ್ಯಕ್ತಿ ಸ್ಥಳೀಯ ಪ್ರಾರ್ಥನಾ ಮಂದಿರಗಳು ಸೇರಿದಂತೆ ಮಹತ್ವದ ಮಾಹಿತಿಗಳನ್ನು ವಿಡಿಯೊ ಸಹಿತ ಪಾಕಿಸ್ತಾನದ ವ್ಯಕ್ತಿಗಳೊಂದಿಗೆ ನಿರಂತರವಾಗಿ ಹಂಚಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಇಲ್ಲಿನ ನಗ್ರೋತಾ ಪ್ರದೇಶದಿಂದ ಪಿಸ್ತೂಲ್ ಕಳವು ಮಾಡಿದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೊಹ್ದ್ ಮುಷ್ತಾಕ್‌ ಅಲಿಯಾಸ್ ಗುಂಗಿ ಎಂದು ಗುರುತಿಸಲಾಗಿದೆ. ಈತ ಮಿರಾನ್ ಸಾಹಿಬ್ ಪ್ರದೇಶ ದಲ್ಲಿರುವ ವ್ಯಕ್ತಿಯೊಬ್ಬನಿಂದ ಪಿಸ್ತೂಲ್ ಕಳವು ಮಾಡಿ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ ಕಳವು ಮಾಡಿದ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವ್ಯಕ್ತಿ ಕುಖ್ಯಾತ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಈತನ ವಿರುದ್ಧ ಕಳವು, ಅತ್ಯಾಚಾರ ಸೇರಿದಂತೆ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.