ADVERTISEMENT

ತಬ್ಲಿಗಿ ಸಮಾವೇಶ: ಕ್ವಾರಂಟೈನ್ ಕೇಂದ್ರದಲ್ಲಿ ವೈದ್ಯರತ್ತ ಉಗುಳಿ ರಂಪಾಟ ಮಾಡಿದರು!

ಪಿಟಿಐ
Published 2 ಏಪ್ರಿಲ್ 2020, 7:25 IST
Last Updated 2 ಏಪ್ರಿಲ್ 2020, 7:25 IST
ನಿಜಾಮುದ್ದೀನ್ ಮಸೀದಿಯಲ್ಲಿ ಡ್ರೋನ್ ಕಣ್ಗಾವಲು (ಪಿಟಿಐ ಚಿತ್ರ)
ನಿಜಾಮುದ್ದೀನ್ ಮಸೀದಿಯಲ್ಲಿ ಡ್ರೋನ್ ಕಣ್ಗಾವಲು (ಪಿಟಿಐ ಚಿತ್ರ)   

ನವದೆಹಲಿ: ತಬ್ಲಿಗಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ್ದ ಸುಮಾರು 7000 ಮಂದಿಯನ್ನು ದೇಶಾದ್ಯಂತ ಪತ್ತೆ ಮಾಡುವ ಕಾರ್ಯವು ಆಡಳಿತಕ್ಕೆ ದೊಡ್ಡ ಸವಾಲು ಆಗಿರುವಂತೆಯೇ, ದೆಹಲಿಯ ಮಸೀದಿಯಿಂದ ಪ್ರತ್ಯೇಕವಾಸಕ್ಕೆ ದಾಖಲಿಸಲಾದವರು ವೈದ್ಯರು ಮತ್ತು ಆರೋಗ್ಯ ಪರಿಚಾರಕರತ್ತ ಉಗುಳುವ ದುರ್ವರ್ತನೆಯನ್ನೂ ತೋರಿದ್ದಾರೆ ಎಂದು ಆಗ್ನೇಯ ದೆಹಲಿಯ ರೈಲ್ವೇ ವಕ್ತಾರರು ಹೇಳಿದ್ದಾರೆ.

ತಬ್ಲಿಗಿ ಜಮಾತ್ ಕೇಂದ್ರ ಕಚೇರಿಯಿರುವ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಭಾಗಿಯಾಗಿ ಬಂದವರಲ್ಲಿ ಹೆಚ್ಚಿನವರಲ್ಲಿ ವಿವಿಧ ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಅದರಲ್ಲಿ ಕೆಲವರು ಸಾವನ್ನಪ್ಪಿದ್ದರು. ಮಸೀದಿಯಲ್ಲೇ ಉಳಿದುಕೊಂಡವರಲ್ಲಿ 167 ಮಂದಿಯನ್ನು ಮಂಗಳವಾರ ರಾತ್ರಿ ಆಗ್ನೇಯ ದೆಹಲಿಯ ರೈಲ್ವೇ ಕಾಲನಿಯ ಕಟ್ಟಡದಲ್ಲಿ ಪ್ರತ್ಯೇಕ ವಾಸಕ್ಕೆ (ಕ್ವಾರಂಟೈನ್) ಒಳಪಡಿಸಲಾಗಿತ್ತು. ಉಳಿದವರನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು ಅಥವಾ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಕೋವಿಡ್-19 ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿರುವ ನಿಜಾಮುದ್ದೀನ್ ಮರ್ಕಜ್‌ನಿಂದ ತೆರವುಗೊಳಿಸಿದವರಲ್ಲಿ ಕೆಲವರನ್ನು ತುಘಲಕಾಬಾದ್‌ನಲ್ಲಿರುವ ಈ ರೈಲ್ವೇ ಕಟ್ಟಡದಲ್ಲಿ ಕ್ವಾರಂಟೈನ್‌ಗೆಂದು ಮಂಗಳವಾರ ಸಂಜೆ ಕರೆತರಲಾಗಿತ್ತು. ಅವರನ್ನು ಕರೆತಂದಾಗ ರೈಲ್ವೇ ಕಾಲನಿಯ ನಿವಾಸಿಗಳು ಈ ಮಾರಣಾಂತಿಕ ರೋಗ ಹರಡುವ ಬಗ್ಗೆ ಆತಂಕಗೊಂಡು ಗದ್ದಲವೆಬ್ಬಿಸಿದರು.

ಈ ವೇಳೆ, ತಮ್ಮನ್ನು ಉಪಚರಿಸುವ ಆರೋಗ್ಯ ಕಾರ್ಯಕರ್ತರೊಂದಿಗೆ ಈ ಕೊರೊನಾ ವೈರಸ್ ಸೋಂಕು ಶಂಕಿತರು ಕೆಟ್ಟದಾಗಿ ವರ್ತಿಸಿದರಲ್ಲದೆ, ತಮಗೆ ನೀಡುತ್ತಿರುವ ಆಹಾರದ ಬಗ್ಗೆ ತೀವ್ರವಾಗಿ ಆಕ್ಷೇಪವೆತ್ತಿದರು. ತಮ್ಮ ಶುಶ್ರೂಷೆಗೆ ಬಂದ ವೈದ್ಯರು ಮತ್ತು ಶುಶ್ರೂಷಕರತ್ತ ಉಗುಳಿದರು. ಮಾತ್ರವಲ್ಲದೆ, ಕ್ವಾರಂಟೈನ್‌ನಲ್ಲಿರುವುದರಿಂದ ತಿರುಗಾಡಬೇಡಿ ಎಂದು ವಿನಂತಿಸಿಕೊಂಡರೂ, ಕೇಳದೆ ಅಲ್ಲೆಲ್ಲ ಸುತ್ತಾಡುತ್ತಿದ್ದರು ಎಂದು ಉತ್ತರ ರೈಲ್ವೇ ವಕ್ತಾರ ದೀಪಕ್ ಕುಮಾರ್ ವಿವರಿಸಿದ್ದಾರೆ.

ಇವರನ್ನು ನಿಯಂತ್ರಿಸಲು ಅಥವಾ ಬೇರೆಡೆ ಸ್ಥಳಾಂತರಿಸಲು ನಾವು ಪೂರ್ವ ದೆಹಲಿಯ ಜಿಲ್ಲಾ ದಂಡಾಧಿಕಾರಿಗಳನ್ನು ವಿನಂತಿಸಿದೆವು. ಸಂಜೆಯ ವೇಳೆಗೆ ಪೊಲೀಸರು ಹಾಗೂ ಸಿಆರ್‌ಪಿಎಫ್ ಜವಾನರನ್ನು ನಿಯೋಜಿಸಲಾಯಿತು ಎಂದು ಕುಮಾರ್ ವಿವರಿಸಿದರು.

ತಬ್ಲಿಗಿ ಜಮಾತ್‌ನ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 97 ಮಂದಿಯನ್ನು ಡೀಸೆಲ್ ಶೆಡ್ ಟ್ರೈನಿಂಗ್ ಸ್ಕೂಲ್ ಹಾಸ್ಟೆಲ್‌ನ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿದ್ದರೆ, 70 ಮಂದಿಯನ್ನು ಆರ್‌ಪಿಎಫ್ ಬರಾಕ್ ಕ್ವಾರಂಟೈನ್ ಕೇಂದ್ರದಲ್ಲಿ ಶುಶ್ರೂಷೆಗೆ ಒಳಪಡಿಸಲಾಯಿತು.

ಕೊರೊನಾ ವೈರಸ್ ಉಗುಳುವುದರಿಂದ ಅಥವಾ ಸೀನುವಾಗ ಬಾಯಿ, ಮೂಗಿನಿಂದ ಸಿಡಿಯುವ ದ್ರವದ ಕಣಗಳಿಂದಲೇ ಹರಡುವ ಬಗ್ಗೆ ಈಗಾಗಲೇ ದೇಶಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. "ಆದರೆ, ಈ ವ್ಯಕ್ತಿಗಳು ನಮ್ಮ ಬಳಿಯೇ ಬಂದು ಕೆಮ್ಮುತ್ತಿದ್ದರು, ಸೀನುತ್ತಿದ್ದರು ಮತ್ತು ರಸ್ತೆಯಲ್ಲಿ ಉಗುಳುತ್ತಿದ್ದರು. ಅವರೆಲ್ಲ ಬಂದು 24 ಗಂಟೆಗಳಾದರೂ ಪರಿಸರವನ್ನು ಸ್ಯಾನಿಟೈಸ್ (ವೈರಾಣುನಾಶಕ ಸಿಂಪಡಣೆ) ಮಾಡಲಾಗಿಲ್ಲ. ನಾವಿಲ್ಲಿ ಸುರಕ್ಷಿತವಾಗಿ ಇರುವುದಾದರೂ ಹೇಗೆ" ಎಂದು ಸ್ಥಳೀಯ ನಿವಾಸಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಯ ಬಳಿ ಆತಂಕ ತೋಡಿಕೊಂಡಿದ್ದಾರೆ.

ಮಾರ್ಚ್ ತಿಂಗಳಲ್ಲಿ ತಬ್ಲಿಗ್-ಇ-ಜಮಾತ್‌ನ ಕೇಂದ್ರ ಕಚೇರಿ (ಮರ್ಕಜ್) ಇರುವ ನಿಜಾಮುದ್ದೀನ್ ಪಶ್ಚಿಮದಲ್ಲಿರುವ ಮಸೀದಿಯಲ್ಲಿ ಧಾರ್ಮಿಕ ಸಮಾವೇಶ ನಡೆದಿತ್ತು. ದೇಶದ ವಿವಿಧ ಭಾಗಗಳ ಮಸೀದಿಗಳ ಧರ್ಮ ಗುರುಗಳು ಹಾಗೂ ವಿದೇಶದ 824 ಮಂದಿ ಧರ್ಮ ಬೋಧಕರು ಇಲ್ಲಿ ಸೇರಿ ಸಮಾವೇಶ ನಡೆಸಿದ್ದರು. ಇದರಲ್ಲಿ ಭಾಗಿಯಾದವರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು ದೃಢಪಟ್ಟಿದ್ದು, ಸಮಾವೇಶಕ್ಕೆ ಬಂದವರು ರೈಲು-ಬಸ್ಸುಗಳಲ್ಲಿ ದೇಶದ ವಿವಿಧೆಡೆ ಸಂಚರಿಸಿದ್ದಾರೆ ಮತ್ತು ಹಲವು ಮಸೀದಿಗಳಲ್ಲಿ ಧರ್ಮ ಪ್ರಚಾರ ಮಾಡಿದ್ದಾರೆ. ಇದೀಗ ಅವರೆಲ್ಲರ ಸಂಪರ್ಕಕ್ಕೆ ಬಂದವರನ್ನೂ ಪತ್ತೆ ಮಾಡಿ, ಕ್ವಾರಂಟೈನ್‌ಗೆ ಒಳಪಡಿಸುವ ಸವಾಲನ್ನು ದೇಶದ ಆಡಳಿತ ಯಂತ್ರ ಎದುರಿಸುತ್ತಿದೆ.

ಈಗಾಗಲೇ ಸಭೆಯಲ್ಲಿ ಭಾಗವಹಿಸಿದ್ದ ತೆಲಂಗಾಣದ 6 ಮಂದಿ ಹಾಗೂ ಜಮ್ಮು ಮತ್ತು ಕಾಶ್ಮೀರದ ಒಬ್ಬರು ಕೋವಿಡ್-19ಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ದೆಹಲಿಯೊಂದರಲ್ಲೇ ಒಂದೇ ದಿನದಲ್ಲಿ 24 ಮಂದಿ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಬುಧವಾರ ಬೆಳಕು ಹರಿಯುವ ಮುನ್ನ ಈ ಮಸೀದಿಯಿಂದ 2346 ಮಂದಿಯನ್ನು ತೆರವುಗೊಳಿಸಿ, ಆಸ್ಪತ್ರೆಗೆ ಹಾಗೂ ವಿವಿಧೆಡೆ ಇರುವ ಕ್ವಾರಂಟೈನ್ ಕೇಂದ್ರಗಳಿಗೆ ರವಾನಿಸಲಾಗಿತ್ತು.

ಈ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದವರು ಮತ್ತು ಅವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಪತ್ತೆ ಹಚ್ಚುವುದು ಕಷ್ಟವಾದುದರಿಂದ, ಸೋಂಕು ಹರಡದಂತೆ ಹಾಗೂ ಅವರ ಆರೋಗ್ಯವನ್ನೂ ಕಾಪಾಡಿಕೊಳ್ಳುವ ಉದ್ದೇಶದಿಂದ, ದಯವಿಟ್ಟು ನೀವಾಗಿಯೇ ನಮ್ಮನ್ನು ಸಂಪರ್ಕಿಸಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ವಿವಿಧ ರಾಜ್ಯಗಳು ವಿನಂತಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.