ಎಂ.ಕೆ. ಸ್ಟಾಲಿನ್ ಮತ್ತು ಕೆ. ಅಣ್ಣಾಮಲೈ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಇಂದು ತಮ್ಮ 71 ನೇ ಜನ್ಮದಿನ ಸಂಭ್ರಮದಲ್ಲಿದ್ದಾರೆ. ಅನೇಕ ಗಣ್ಯರು ಅವರಿಗೆ ಶುಭಾಶಯ ಕೋರುತ್ತಿದ್ದಾರೆ.
ಆದರೆ ತಮಿಳುನಾಡು ಬಿಜೆಪಿ, ಸ್ಟಾಲಿನ್ ಅವರಿಗೆ ಚೀನಿ ಭಾಷೆಯಲ್ಲಿ ಶುಭಾಶಯ ಕೋರಿ ಟ್ವೀಟ್ ಮಾಡಿದೆ.
ಚೀನಾದ ಧ್ವಜ ಒಳಗೊಂಡಿರುವ ಜಾಹೀರಾತು ವಿವಾದ ಸೃಷ್ಟಿಸಿದ ಬೆನ್ನಲ್ಲೆ ಬಿಜೆಪಿ ಈ ವ್ಯಂಗ್ಯವಾಗಿ ಶುಭಕೋರಿದೆ.
ಈ ಕುರಿತು ತಮಿಳುನಾಡು ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 'ತಮಿಳುನಾಡು ಬಿಜೆಪಿ ಪರವಾಗಿ, ನಿಮ್ಮ ಇಷ್ಟದ ಭಾಷೆಯಲ್ಲಿ ಜನ್ಮದಿನದ ಶುಭಕೋರುತ್ತಿದ್ದೇವೆ, ದೀರ್ಘಕಾಲ ಆರೋಗ್ಯದಿಂದ ಬದುಕಿ’ ಎಂದು ಬರೆದುಕೊಂಡಿದೆ. ಇದಕ್ಕೆ ಕಿಡಿಕಾರಿರುವ ಡಿಎಂಕೆ, ಸುಮ್ಮನೇ ಪ್ರಚಾರ ಗಿಟ್ಟಿಸುವ ತಂತ್ರ ಮಾಡಬೇಡಿ ಎಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು, ಇದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಡಿಎಂಕೆ ನಾಯಕಿ ಕನಿಮೋಳಿ ಅವರು, ಚೀನಾವನ್ನು ವೈರಿ ರಾಷ್ಟ್ರ ಎಂದು ಗುರುತಿಸಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಇದರಲ್ಲಿ ಯಾವುದೇ ತಪ್ಪಿಲ್ಲ. ಸ್ಟಾಲಿನ್ ಅವರಿಗೆ ಇಷ್ಟವಾದ ಭಾಷೆಯಲ್ಲಿ ಶುಭ ಕೋರಿದ್ದೇವೆ ಎಂದಿದ್ದಾರೆ.
ತಮಿಳುನಾಡಿನ ಕುಲಶೇಖರಪಟ್ಟಿಣಂನಲ್ಲಿ ಇಸ್ರೊದ ರಾಕೆಟ್ ಉಡ್ಡಯನ ನೆಲೆ ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಮಿಳುನಾಡು ಪಶುಸಂಗೋಪನೆ ಸಚಿವ ಎ.ಆರ್. ರಾಧಾಕೃಷ್ಣನ್ ನೀಡಿರುವ ಜಾಹೀರಾತು ತಮಿಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.
ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಭಾವಚಿತ್ರಗಳ ಜೊತೆಗೆ ರಾಕೆಟ್‌ವೊಂದರ ಚಿತ್ರವೂ ಜಾಹೀರಾತಿನಲ್ಲಿದೆ. ಆದರೆ, ರಾಕೆಟ್‌ನ ತುದಿಯಲ್ಲಿ ಚೀನಾ ಬಾವುಟ ಹಾಗೂ ಚೀನಿ ಅಕ್ಷರಗಳಿವೆ ಎಂಬ ಆರೋಪ ವಿವಾದ ಸೃಷ್ಟಿಸಿತ್ತು.
‘ಕುಲಶೇಖರಪಟ್ಟಿಣಂನಲ್ಲಿ ಇಸ್ರೊ ಸಂಕೀರ್ಣ ಸ್ಥಾಪನೆಯ ಶ್ರೇಯಸ್ಸನ್ನು ತಾನು ಪಡೆಯುವ ಸಲುವಾಗಿ ಡಿಎಂಕೆ, ಜಾಹೀರಾತಿನಲ್ಲಿ ಚೀನಾ ಬಾವುಟ ಹಾಗೂ ಭಾಷೆಯನ್ನು ಬಳಸಿಕೊಂಡಿದೆ’ ಬಿಜೆಪಿಯ ರಾಜ್ಯ ಘಟಕ ಆರೋಪ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.