ಅಣ್ಣಾಮಲೈ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಚಿತ್ರ
ಚೆನ್ನೈ: ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ನಡುವಿನ ಭಾಷಾ ವಿವಾದ ಸಮರ ಮುಂದುವರಿದಿದೆ. 2025–26ರ ರಾಜ್ಯ ಬಜೆಟ್‌ನ ಲಾಂಛನವನ್ನು ತಮಿಳುನಾಡು ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ರೂಪಾಯಿ ಚಿಹ್ನೆಗೆ ಬದಲಾಗಿ ತಮಿಳು ಅಕ್ಷರ ಬಳಸಿದೆ.
ಇದು ರಾಜ್ಯ ಬಿಜೆಪಿ ಘಟಕದ ಕಣ್ಣು ಕೆಂಪಾಗಿಸಿದೆ.
ತಮಿಳುನಾಡು ಹಣಕಾಸು ಸಚಿವ ತಂಗಂ ತೆನ್ನರಸು ಶುಕ್ರವಾರ 2025–26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.
ಹೊಸ ಲಾಂಛನದಲ್ಲಿ ರೂಪಾಯಿ ಚಿಹ್ನೆ ಬದಲಿಗೆ ತಮಿಳು ಅಕ್ಷರ ‘ರೂ’ ಅನ್ನು ಬಳಸಲಾಗಿದೆ. ತಮಿಳಿನ ‘ರೂಬಾಯಿ’ಯ ಸಂಕ್ಷಿಪ್ತ ರೂಪವೇ ‘ರೂ’.
ಬಜೆಟ್ ಲಾಂಛನದಲ್ಲಿ ‘ಎಲ್ಲರಿಗೂ ಎಲ್ಲವೂ’ ಎನ್ನುವ ಅಡಿಬರಹ ಇದ್ದು, ಎಲ್ಲರನ್ನೂ ಒಳಗೊಳ್ಳುವುದರ ಸಂಕೇತ ಎಂದು ಡಿಎಂಕೆ ಸರ್ಕಾರ ಹೇಳಿದೆ.
ಸರ್ಕಾರದ ಈ ನಡೆಯನ್ನು ರಾಜ್ಯ ಬಿಜೆಪಿ ಘಟದ ಅಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ.
‘ಡಿಎಂಕೆ ಸರ್ಕಾರದ 2025–26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ತಮಿಳು ವ್ಯಕ್ತಿ ನೀಡಿದ ರೂಪಾಯಿ ಚಿಹ್ನೆಯನ್ನು ಬದಲಿಸಿದೆ. ಆ ಚಿಹ್ನೆಯನ್ನು ಇಡೀ ಭಾರತ ಒಪ್ಪಿಕೊಂಡಿದೆಯಲ್ಲದೇ, ಕರೆನ್ಸಿಯಲ್ಲೂ ಸೇರಿಸಲಾಗಿದೆ. ರೂಪಾಯಿ ಚಿಹ್ನೆಯನ್ನು ರಚಿಸಿದ ಶ್ರೀ ಉದಯ್ ಕುಮಾರ್ ಅವರು ಡಿಎಂಕೆಯ ಮಾಜಿ ಶಾಸಕರ ಪುತ್ರ. ಸ್ಟಾಲಿನ್ ಅವರೇ ನೀವು ಎಷ್ಟು ಮೂರ್ಖರಾಗಿರಬಹುದು?’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪೋಸ್ಟ್ ಜೊತೆಗೆ ಬಜೆಟ್‌ನ ಲಾಂಛನವನ್ನೂ ಹಂಚಿಕೊಂಡಿದ್ದಾರೆ.
ಬಿಜೆಪಿಯ ಹಿರಿಯ ನಾಯಕಿ ತಮಿಳಿಸೈ ಸೌಂದರರಾಜನ್ ಕೂಡ, ರಾಜ್ಯ ಸರ್ಕಾರದ ಈ ನಡೆಯನ್ನು ಟೀಕಿಸಿದ್ದಾರೆ.
‘ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಅವರ ನೇತೃತ್ವದ ಸರ್ಕಾರದ ಈ ವರ್ತನೆ ಅಸಹ್ಯಕರ’ ಎಂದು ಅವರು ಪಿಟಿಐ ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಟೀಕೆಗಳಿಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ ಮೂಲಕ ಪ್ರತಿಕ್ರಿಯಿಸಿರುವ ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ,‘ಯಾವುದೇ ನಿಯಮವು ತಮಿಳು ಅಕ್ಷರ ‘ರೂ’ ಅನ್ನು ಬಜೆಟ್ ಪ್ರತಿಗಳಲ್ಲಿ ಬಳಸುವುದನ್ನು ವಿರೋಧಿಸಿಲ್ಲ ಇಲ್ಲವೇ ತಡೆದಿಲ್ಲ. ಹೀಗಾಗಿ ಈ ಆಕ್ರೋಶ ಏಕೆ’ ಎಂದಿದ್ದಾರೆ.
ರೂಪಾಯಿ ಚಿಹ್ನೆಯನ್ನು 2010ರ ಜುಲೈ 15ರಂದು ಕೇಂದ್ರ ಸರ್ಕಾರ ಅಳಡಿಸಿಕೊಂಡಿದೆ.
‘ತಮಿಳು ಭಾಷಿಕ ವಿನ್ಯಾಸ ಮಾಡಿರುವ ರೂಪಾಯಿ ಚಿಹ್ನೆಯನ್ನು ಭಾರತದ ಕರೆನ್ಸಿಯಲ್ಲಿ ಅಳವಡಿಸಿಕೊಳ್ಳಲಾಗಿದೆ’ ಎಂದು ಅಣ್ಣಾಮಲೈ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ‘ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸಿರುವ ಉದಯಕುಮಾರ್ ಅವರು ಡಿಎಂಕೆಯ ಮಾಜಿ ಶಾಸಕರೊಬ್ಬರ ಪುತ್ರ. ಈಗ ಈ ಚಿಹ್ನೆಯನ್ನು ಬಳಸದಿರುವ ನೀವು ಎಂತಹ ಅಜ್ಞಾನಿ ಸ್ಟಾಲಿನ್ ಅವರೇ’ ಎಂದೂ ಅಣ್ಣಾಮಲೈ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.