ಕೋಲ್ಕತ್ತ: ಪಶ್ಚಿಮ ಬಂಗಾಳ ಸರ್ಕಾರವು ಕಲಾವಿದರು, ಲೇಖಕರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಬಾಂಗ್ಲಾದೇಶದಿಂದ ಗಡೀಪಾರಾಗಿರುವ ಲೇಖಕಿ ತಸ್ಲೀಮಾ ನಸ್ರೀನ್ ಆರೋಪಿಸಿದ್ದಾರೆ.
ಎರಡು ನಾಟಕೋತ್ಸವಗಳಲ್ಲಿ ತಮ್ಮ ಕಾದಂಬರಿ ಆಧಾರಿತ ‘ಲಜ್ಜಾ’ ನಾಟಕದ ಪ್ರದರ್ಶನವನ್ನು ಬಲವಂತವಾಗಿ ರದ್ದು ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಿಡಿಕಾರಿದ್ದಾರೆ.
ಉತ್ತರ ಪರಗಣದ ಗೋಬರ್ಡಂಗಾ ನಾಟಕೋತ್ಸವ ಮತ್ತು ಹೂಗ್ಲಿಯ ಪಾಂಡುವಾ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದ ನಾಟಕವನ್ನು ರದ್ದು ಮಾಡುವಂತೆ ಪೊಲೀಸರು ಆಯೋಜಕರಿಗೆ ತಿಳಿಸಿದ್ದಾರೆ. ನಾಟಕವು ಕೋಮು ಗಲಭೆಗೆ ಕಾರಣವಾಗಬಹುದು ಎಂದು ಪೊಲೀಸರು ಹೇಳಿದ್ದಾರೆ ಎಂದು ದೂರಿದ್ದಾರೆ.
‘ನಾಟಕ ಪ್ರದರ್ಶನ ವಿಚಾರವನ್ನು ಎರಡು ತಿಂಗಳ ಹಿಂದೆಯೇ ಘೋಷಿಸಲಾಗಿದೆ. ಆದರೆ ಪೊಲೀಸರು ಈಗ ಏಕಾಏಕಿ ಬಂದು, ಪ್ರದರ್ಶನಗೊಳ್ಳುವ ನಾಟಕಗಳ ಪಟ್ಟಿಯಿಂದ ‘ಲಜ್ಜಾ’ವನ್ನು ತೆಗೆದುಹಾಕುವಂತೆ ಒತ್ತಡ ಹೇರಿದ್ದಾರೆ. ಇದೇ ನಾಟಕವು ದೆಹಲಿಯಲ್ಲಿ ಮೂರು ಬಾರಿ ಪ್ರದರ್ಶನಗೊಂಡಿದೆ ಎಂದು ನೆನಪಿಸಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಆಡಳಿತವು ನಾಟಕವು ಹಿಂಸಾಚಾರಕ್ಕೆ ಕಾರಣವಾಗಬಹುದು ಎಂಬ ನೆಪ ಹೇಳುತ್ತಿದೆ ಎಂದು ಟೀಕಿಸಿದ್ದಾರೆ.
ಈ ಮಧ್ಯೆ ತಸ್ಲೀಮಾ ಅವರನ್ನು ಬಿಜೆಪಿ ಬೆಂಬಲಿಸಿದೆ. ಕೇಂದ್ರ ಸಚಿವ ಸುಕಾಂತ್ ಮುಜುಂದಾರ್ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪ ಅಲ್ಲಗಳೆದ ಪೊಲೀಸರು
ತಸ್ಲೀಮಾ ಅವರ ಆರೋಪವನ್ನು ಅಲ್ಲಗಳೆದಿರುವ ಪೊಲೀಸರು ‘ಲಜ್ಜಾ’ ನಾಟಕ ಪ್ರದರ್ಶನವನ್ನು ರದ್ದು ಮಾಡಲು ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆ ಹೇಳಿಲ್ಲ. ಅದು ಆಯೋಜಕರ ನಿರ್ಧಾರ ಎಂದು ಹೇಳಿದ್ದಾರೆ. ‘ಹೂಗ್ಲಿ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಿರುವ ನಾಟಕ ಪ್ರದರ್ಶನ ವಿಚಾರವಾಗಿ ಯಾರೊಂದಿಗೂ ಮಾತನಾಡಿಲ್ಲ. ಪೊಲೀಸ್ ಇಲಾಖೆಗೂ ಇದಕ್ಕೂ ಸಂಬಂಧ ಇಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.