ADVERTISEMENT

ಭಯೋತ್ಪಾದಕ ನಂಟು ಆರೋಪ | ಟೆಕಿ ಬಂಧನ: ಪುಣೆ, ಠಾಣೆಯಲ್ಲಿ ಎಟಿಎಸ್ ಶೋಧ

ಪಿಟಿಐ
Published 12 ನವೆಂಬರ್ 2025, 14:41 IST
Last Updated 12 ನವೆಂಬರ್ 2025, 14:41 IST
   

ಮುಂಬೈ: ಅಲ್‌ ಖೈದಾ ಮತ್ತಿತರೆ ನಿಷೇಧಿತ ಉಗ್ರ ಸಂಘಟನೆಗಳ ಜೊತೆಗೆ ನಂಟು ಹೊಂದಿದ್ದ ಆರೋಪದ ಮೇಲೆ ಇತ್ತೀಚೆಗೆ ಬಂಧಿಸಲಾಗಿದ್ದ ಐಟಿ ಎಂಜಿನಿಯರ್‌ ಜೊತೆ ಸಂಪರ್ಕದಲ್ಲಿದ್ದ ಕಾರಣಕ್ಕಾಗಿ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಠಾಣೆಯ ಶಿಕ್ಷಕ ಮತ್ತು ಪುಣೆಯ ವ್ಯಕ್ತಿಯೊಬ್ಬರ ಮನೆ ಸೇರಿದಂತೆ ಇತರೆಡೆ ಶೋಧ ನಡೆಸಿದ್ದಾರೆ.

ಎಟಿಎಸ್‌ ಅಧಿಕಾರಿಗಳು ಬುಧವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಪರಿಶೀಲನೆಗೂ ಸೋಮವಾರ ದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿ ಸ್ಫೋಟಕ್ಕೆ ಮಹಾರಾಷ್ಟ್ರ ಸಂಪರ್ಕ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆದಿದೆ. ಠಾಣೆಯ ಮುಂಬ್ರಾದಲ್ಲಿದ್ದ ಶಿಕ್ಷಕರ ಮನೆಯಲ್ಲಿ ಬಂಧಿತ ಐಟಿ ಎಂಜಿನಿಯರ್‌ ಜುಬೇರ್‌ ಹಂಗರ್ಗೇಕರ್‌ ಸಭೆ ಮಾಡಿದ್ದ ಮಾಹಿತಿ ಸಿಕ್ಕಿತ್ತು. ಆದರೆ, ಶಿಕ್ಷಕ ಈ ಪ್ರಕರಣದ ಆರೋಪಿ ಅಥವಾ ಸಾಕ್ಷಿಯಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

37 ವರ್ಷದ ಜುಬೇರ್‌ನನ್ನು ಸಮಾಜಘಾತಕ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಮೇಲೆ ಅಕ್ಟೋಬರ್‌ 27ರಂದು ಎಟಿಎಸ್‌ ಬಂಧಿಸಿತ್ತು. ಆತನ ಹಳೆಯ ಮೊಬೈಲ್‌ನಲ್ಲಿ ಪಾಕಿಸ್ತಾನ ಸೇರಿ ಹಲವು ವಿದೇಶಗಳ ಸಂಪರ್ಕ ಸಂಖ್ಯೆ ದೊರೆತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.