ADVERTISEMENT

ಬಾಲಕಿ ಗರ್ಭಿಣಿ ಪ್ರಕರಣ: ಡಿಎನ್‌ಎ ಪರೀಕ್ಷೆಯಲ್ಲಿ ಸುಳ್ಳು ಸಾಬೀತು

ಹದಿಹರೆಯದ ಯುವಕನ ಮೇಲೆ ಅತ್ಯಾಚಾರ ಆರೋಪ: ಪೊಕ್ಸೊ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 12:34 IST
Last Updated 30 ಆಗಸ್ಟ್ 2021, 12:34 IST
ಡಿಎನ್‌ಎ ಪರೀಕ್ಷೆ–ಪ್ರಾತಿನಿಧಿಕ ಚಿತ್ರ
ಡಿಎನ್‌ಎ ಪರೀಕ್ಷೆ–ಪ್ರಾತಿನಿಧಿಕ ಚಿತ್ರ   

ತಿರುವನಂತಪುರ: ಬಾಲಕಿ ಮೇಲೆ ಅತ್ಯಾಚಾರವೆಸಗಿ, ಗರ್ಭಿಣಿಯಾಗಲು ಕಾರಣನಾಗಿದ್ದಾನೆ ಎನ್ನುವ ಆರೋಪದ ಮೇಲೆ ಹದಿಹರೆಯದ ಯುವಕನೊಬ್ಬ 35 ದಿನಗಳ ಜೈಲು ವಾಸ ಅನುಭವಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಆದರೆ, ಡಿಎನ್‌ಎ ಪರೀಕ್ಷೆಯಲ್ಲಿ ಬಾಲಕಿ ಗರ್ಭಿಣಿಯಾಗಲು ಈತ ಕಾರಣ ಅಲ್ಲ ಎನ್ನುವುದು ಸಾಬೀತಾಗಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಪ್ಪುರಂ ಜಿಲ್ಲೆಯ 18 ವರ್ಷದ ಯುವಕ ಶ್ರೀನಾಥ್‌ ಎಂಬಾತನನ್ನು ಬಂಧಿಸಲಾಗಿತ್ತು. ಈತನ ಮನೆ ಸಮೀಪದ ಪ್ರದೇಶದಲ್ಲಿದ್ದ 17 ವರ್ಷದ ಬಾಲಕಿ ಮಾಡಿದ ಆರೋಪದ ಕಾರಣಕ್ಕೆ ಪೊಲೀಸರು ಕಳೆದತಿಂಗಳು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಪೊಕ್ಸೊ ಕಾಯ್ದೆ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದ್ದರಿಂದ ಯುವಕನಿಗೆ ಜಾಮೀನು ದೊರೆತಿರಲಿಲ್ಲ. ಆದರೆ, ತಾನು ತಪ್ಪು ಮಾಡಿಲ್ಲ ಎಂದು ಶ್ರೀನಾಥ್‌ ಪ್ರತಿಪಾದಿಸಿದ್ದ. ಹೀಗಾಗಿ, ಡಿಎನ್‌ಎ ಪರೀಕ್ಷೆ ಕೈಗೊಳ್ಳಲಾಗಿತ್ತು. ಬಾಲಕಿ ಗರ್ಭಿಣಿಯಾಗಲು ಶ್ರೀನಾಥ್‌ ಕಾರಣ ಅಲ್ಲ ಎನ್ನುವುದು ಪರೀಕ್ಷೆಯಲ್ಲಿ ಗೊತ್ತಾಗಿದ್ದರಿಂದ ನ್ಯಾಯಾಲಯ ಜಾಮೀನು ನೀಡಿದೆ.

‘ದಿನಗೂಲಿ ಕಾರ್ಮಿಕರ ಕುಟುಂಬದ ಶ್ರೀನಾಥ್‌ 12ನೇ ತರಗತಿ ಓದುತ್ತಿದ್ದಾನೆ. ಇಂತಹ ಸುಳ್ಳು ಆರೋಪ ಜೀವನವನ್ನೇ ಹಾಳು ಮಾಡುತ್ತದೆ. ಆರೋಪಗಳು ಬಂದ ಮೇಲೆ ಹಲವರು ಕುಟುಂಬದಿಂದ ದೂರವಾಗಿದ್ದಾರೆ’ ಎಂದು ಶ್ರೀನಾಥ್‌ ಅವರ ಚಿಕ್ಕಪ್ಪ ಸುರೇಶ್‌ ಕುಮಾರ್ ತಿಳಿಸಿದ್ದಾರೆ.

ADVERTISEMENT

‘ಬಾಲಕಿ ಆರೋಪ ಮಾಡಿದ ಮೇಲೆ ಪೊಲೀಸರು ತಾಳ್ಮೆಯಿಂದ ಪರಿಶೀಲನೆ ಕೈಗೊಂಡಿದ್ದರೆ ನಮಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಶ್ರೀನಾಥ್‌ ಬಲವಂತದಿಂದ ಆಕೆಯನ್ನು ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ ಎಂದು ಬಾಲಕಿ ಆರೋಪಿಸಿದ್ದಳು. ಬಾಲಕಿ ಭಾನುವಾರ ಈ ಕೃತ್ಯ ನಡೆದಿದೆ ಎಂದು ತಿಳಿಸಿದ್ದಳು. ಆದರೆ, ಸಾಮಾನ್ಯವಾಗಿ ಭಾನುವಾರ ಮನೆಯಲ್ಲಿ ಕುಟುಂಬದ ಇತರ ಸದಸ್ಯರು ಸಹ ಇರುತ್ತಾರೆ’ ಎಂದು ಅವರು ವಿವರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್‌ ಅಧಿಕಾರಿಗಳು, ‘ಪೊಕ್ಸೊ ಅಡಿಯಲ್ಲಿ ಬಾಲಕಿ ನೀಡಿದ ಹೇಳಿಕೆ ಅನ್ವಯ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗಿದೆ. ಆರೋಪಿಯನ್ನು ಗುರುತಿಸಲು ಬಾಲಕಿಯನ್ನು ಮತ್ತೆ ಕೌನ್ಸೆಲಿಂಗ್‌ ಮಾಡಲಾಗುವುದು. ಬಾಲಕಿ ಗರ್ಭಿಣಿಯಾಗಲು ಶ್ರೀನಾಥ್‌ ಕಾರಣ ಅಲ್ಲ ಎನ್ನುವುದು ಮಾತ್ರ ಡಿಎನ್‌ಎ ಪರೀಕ್ಷೆಯಲ್ಲಿ ಗೊತ್ತಾಗಿದೆ. ಒಂದು ವೇಳೆ, ಬಾಲಕಿ ತನ್ನ ಆರೋಪಕ್ಕೆ ಬದ್ಧವಾಗಿಯೇ ಉಳಿದರೆ ಶ್ರೀನಾಥ್‌ ವಿರುದ್ಧ ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.