
ನವದೆಹಲಿ: ಈಚೆಗೆ ದುಬೈ ಏರ್‌ಶೋ ವೇಳೆ ಪತನಗೊಂಡ ಭಾರತೀಯ ವಾಯುಪಡೆಯ ‘ತೇಜಸ್’ ಲಘು ಯುದ್ಧ ವಿಮಾನ ದುರಂತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರ ಅಂತ್ಯಸಂಸ್ಕಾರವನ್ನು ಭಾನುವಾರ ಹಿಮಾಚಲ ಪ್ರದೇಶದಲ್ಲಿ ನೆರವೇರಿಸಲಾಯಿತು.
ನಮಾಂಶ್ ಸಯಾಲ್ ಅವರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ಕೊಯಮತ್ತೂರಿನ ಸುಲೂರು ವಾಯುನೆಲೆಗೆ ತಂದು ನಮನ ಸಲ್ಲಿಸಲಾಯಿತು. ಬಳಿಕ ಸಯಾಲ್ ಹುಟ್ಟೂರಾದ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪಟಿಯಾಲ್ಕರ್‌ಗೆ ಕೊಂಡೊಯ್ಯಲಾಯಿತು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ವಾಯುಪಡೆ ಅಧಿಕಾರಿಯೂ ಆಗಿರುವ ಸಯಾಲ್ ಅವರ ಪತ್ನಿ ಅಫ್ಶಾನ್, 6 ವರ್ಷದ ಮಗಳು ಹಾಗೂ ಪೋಷಕರು ಸಯಾಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಸಕಲ ಸೇನಾ ಗೌರವಗಳೊಂದಿಗೆ ಸಯಾಲ್ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ನವೆಂಬರ್ 21ರಂದು (ಶುಕ್ರವಾರ) ದುಬೈ ಏರ್‌ಶೋ ವೇಳೆ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) ‘ತೇಜಸ್’ ಪತನಗೊಂಡಿದ್ದು, ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಮೃತಪಟ್ಟಿದ್ದರು.
ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿ ಪಡಿಸಿರುವ, ಏಕ ಎಂಜಿನ್‌ನ ಈ ಯುದ್ಧ ವಿಮಾನವು ಏರ್‌ಶೋನಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ, ಶುಕ್ರವಾರ ಮಧ್ಯಾಹ್ನ 2.10ರ ಸುಮಾರಿಗೆ ನೋಡು ನೋಡುತ್ತಿದ್ದಂತೆ ಆಗಸದಿಂದ ನೆಲಕ್ಕೆ ಅಪ್ಪಳಿಸಿ ಹೊತ್ತಿ ಉರಿದಿತ್ತು. ವಿಮಾನ ಪತನಗೊಂಡ ಆಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿತ್ತು. ದುರ್ಘಟನೆಯಲ್ಲಿ ಪೈಲಟ್ ಮೃತಪಟ್ಟಿರುವುದನ್ನು ವಾಯುಪಡೆ ಸಂಜೆಯ ವೇಳೆಗೆ ದೃಢಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.