– ಪ್ರಜಾವಾಣಿ ಚಿತ್ರ
ಹೈದರಾಬಾದ್: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಐದು ಹಂತಗಳಲ್ಲಿ ನಡೆಯಲಿದೆ ಎಂದು ತೆಲಂಗಾಣ ಚುನಾವಣಾ ಆಯೋಗವು ಸೋಮವಾರ ಪ್ರಕಟಿಸಿದೆ.
ಮಾದರಿ ನೀತಿ ಸಂಹಿತೆಯು ಇಂದಿನಿಂದ ಜಾರಿಗೆ ಬರಲಿದೆ.
ಮಾಧ್ಯಮದವರೊಂದಿಗೆ ಮಾತನಾಡಿರವ ರಾಜ್ಯ ಚುನಾವಣಾ ಆಯುಕ್ತೆ ರಾಣಿ ಕುಮುದಿನಿ ಅವರು, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೆ ಮೊದಲು ಚುನಾವಣೆ ನಡೆಯಲಿದೆ. ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ಜರುಗಲಿದೆ ಎಂದು ತಿಳಿಸಿದ್ದಾರೆ.
ಒಟ್ಟು 12,733 ಗ್ರಾಮ ಪಂಚಾಯಿತಿಗಳು, 5,749 ತಾಲ್ಲೂಕು ಪಂಚಾಯಿತಿ ಹಾಗೂ 565 ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. 81.65 ಲಕ್ಷಕ್ಕೂ ಹೆಚ್ಚು (81,65,894) ಪುರುಷರು, 85.36 ಲಕ್ಷಕ್ಕೂ ಅಧಿಕ (85,36,770) ಮಹಿಳೆಯರು ಹಾಗೂ 504 ಇತರರು ಸೇರಿದಂತೆ ಒಟ್ಟು 1.67 ಕೋಟಿಗೂ ಅಧಿಕ (1,67,03,168) ಮತದಾರರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತಕ್ಕೆ ಅಕ್ಟೋಬರ್ 9ರಂದು ಅಧಿಸೂಚನೆ ಹೊರಡಿಸಲಾಗುವುದು. ಅದೇ ದಿನದಿಂದ ನಾಮಪತ್ರ ಸಲ್ಲಿಸಬಹುದಾಗಿದೆ. ಅಕ್ಟೋಬರ್ 23ರಂದು ಮತದಾನ ನಡೆಯಲಿದೆ.
ಎರಡನೇ ಹಂತದ ಚುನಾವಣೆಗೆ ಅಕ್ಟೋಬರ್ 13ರಂದು ಅಧಿಸೂಚನೆ ಹೊರಡಿಸಲಾಗುವುದು. ಅದೇ ದಿನದಿಂದ ನಾಮಪತ್ರ ಸಲ್ಲಿಸಬಹುದಾಗಿದೆ. ಮತದಾನ ಅಕ್ಟೋಬರ್ 27ರಂದು ನಡೆಯಲಿದೆ. ಎರಡೂ ಹಂತಗಳ ಫಲಿತಾಂಶ ನವೆಂಬರ್ 11ರಂದು ಪ್ರಕಟವಾಗಲಿದೆ.
ಮೂರು ಹಂತಗಳಲ್ಲಿ ಗ್ರಾ.ಪಂ. ಚುನಾವಣೆ
ಗ್ರಾಮ ಪಂಚಾಯಿತಿಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತಕ್ಕೆ ಅಕ್ಟೋಬರ್ 17ರಂದು ಅಧಿಸೂಚನೆ ಹೊರಡಿಸಲಾಗುವುದು. ಅಕ್ಟೋಬರ್ 31ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆಯೂ ನಡೆಯಲಿದೆ.
ಎರಡನೇ ಹಂತದ ಚುನಾವಣೆಗೆ ಅಕ್ಟೋಬರ್ 21ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಮತದಾನ ಹಾಗೂ ಫಲಿತಾಂಶ ಪ್ರಕಟಕ್ಕೆ ನವೆಂಬರ್ 4ರಂದು ದಿನಾಂಕ ನಿಗದಿಯಾಗಿದೆ.
ಮೂರನೇ ಹಂತದ ಚುನಾವಣೆಗೆ ಅಕ್ಟೋಬರ್ 25ರಂದು ಅಧಿಸೂಚನೆ ಪ್ರಕಟವಾಗಲಿದೆ. ನವೆಂಬರ್ 8ರಂದು ಮತದಾನವಾಗಿ, ಅದೇ ದಿನ ಫಲಿತಾಂಶ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.