ಪ್ರಾತಿನಿಧಿಕ ಚಿತ್ರ
–ಪಿಟಿಐ ಚಿತ್ರ
ನಾಗರಕುರ್ನೂಲ್: ತಿಂಗಳ ಹಿಂದೆ (ಫೆ. 22) ನಡೆದಿದ್ದ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಸುರಂಗದ ಭಾಗಶಃ ಕುಸಿತ ಪ್ರಕರಣದಲ್ಲಿ ಮತ್ತೊಬ್ಬ ಕಾರ್ಮಿಕನ ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಇದರಿಂದಾಗಿ ಮೃತರ ಸಂಖ್ಯೆ ಎರಡಕ್ಕೆ ಏರಿದೆ. ಮಂಗಳವಾರ ದೊರೆತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ. ವ್ಯಕ್ತಿಯ ಗುರುತು ತಕ್ಷಣಕ್ಕೆ ಪತ್ತೆಯಾಗಿಲ್ಲ. ಇನ್ನಿತರ ಪ್ರಕ್ರಿಯೆಗಳು ಬಾಕಿ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಲುವೆಗಾಗಿ ನಿರ್ಮಿಸಿದ್ದ ಸುರಂಗದ ಒಂದು ಭಾಗವು ಫೆ. 22ರಂದು ಕುಸಿದಿತ್ತು. ಎಂಜಿನಿಯರ್ ಮತ್ತು ಕಾರ್ಮಿಕರು ಸೇರಿ ಒಟ್ಟು ಏಳು ಜನ ಸಿಲುಕಿದ್ದರು. ಇವರಲ್ಲಿ ಸುರಂಗ ಕೊರೆಯುವ ಯಂತ್ರದ ಚಾಲಕ ಗುರುಪ್ರೀತ್ ಸಿಂಗ್ ಅವರ ಮೃತದೇಹ ಮಾರ್ಚ್ 9ರಂದು ಪತ್ತೆಯಾಗಿತ್ತು. ಅವರ ಕುಟುಂಬಕ್ಕೆ ಪಾರ್ಥೀವ ಶರೀರವನ್ನು ಹಸ್ತಾಂತರಿಸಲಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಕೆಲ ಖಾಸಗಿ ಕಂಪನಿಗಳಿಗೆ ಸೇರಿದ ದೇಶದ 25 ರಾಜ್ಯಗಳ ಸುಮಾರು 700 ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಏಳು ಜನರು ಕುಸಿದ ಸುರಂಗದಲ್ಲಿ ಸಿಲುಕಿದ್ದರು.
ಸುರಂಗದ 14 ಕಿ.ಮೀ. ದೂರದಲ್ಲಿ ಭೂಕುಸಿತ ಉಂಟಾಗಿದೆ. ಅಲ್ಲಿ ಬೆಳಕು ಮತ್ತು ಗಾಳಿಯ ಪ್ರಮಾಣ ಕಡಿಮೆ ಇರುವುದರಿಂದ ರಕ್ಷಣಾ ಕಾರ್ಯಾಚರಣೆ ಕಠಿಣ ಮತ್ತು ವಿಳಂಬವಾಗುತ್ತಿದೆ. ಘಟನೆ ನಡೆದಿರುವ ಭಾಗದ ಸುತ್ತಲಿನ 30 ಮೀ. ಪ್ರದೇಶವು ಅತ್ಯಂತ ಅಪಾಯಕಾರಿಯಾಗಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರಿಗೆ ಅಧಿಕಾರಿಗಳ ಸೋಮವಾರ ಮಾಹಿತಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.