ADVERTISEMENT

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರಿಂದ ಭೀತಿ ಸೃಷ್ಟಿ: ಸತ್ಯಶೋಧನಾ ವರದಿ

ಶೆಮಿಜ್‌ ಜಾಯ್‌
Published 27 ಡಿಸೆಂಬರ್ 2019, 1:17 IST
Last Updated 27 ಡಿಸೆಂಬರ್ 2019, 1:17 IST
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್    

ನವದೆಹಲಿ: ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಾಗಿ ಉತ್ತರ ಪ್ರದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಅಲ್ಪಸಂಖ್ಯಾತರು, ಪ್ರತಿಭಟನಕಾರರು ಮತ್ತು ಸಾಮಾಜಿಕ ಹೋರಾಟಗಾರರ ವಿರುದ್ಧ ಭಂಡವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸತ್ಯಶೋಧನಾ ತಂಡವೊಂದು ಗುರುವಾರ ಹೇಳಿದೆ.

‘ಈ ಎಲ್ಲವೂ ಯೋಗಿ ಅವರ ವೈಯಕ್ತಿಕ ಮಾರ್ಗದರ್ಶನ, ಅನುಮತಿ ಮತ್ತು ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ’ ಎಂದು ಹಮ್‌ ಭಾರತ್‌ ಕೆ ಲೋಗ್‌: ನ್ಯಾಷನಲ್‌ ಆ್ಯಕ್ಷನ್‌ ಅಗೇನ್‌ಸ್ಟ್‌ ಸಿಎಎ ಎಂಬ ಸಮಿತಿಯ ವರದಿಯು ಆರೋಪಿಸಿದೆ. 70 ಸಂಘಟನೆಗಳು ಜತೆಯಾಗಿ ಈ ಸಮಿತಿಯನ್ನು ರಚಿಸಿಕೊಂಡಿವೆ.

‘ಪ್ರತಿಭಟನಕಾರರ ವಿರುದ್ಧ ಸೇಡು ತೀರಿಸಿಕೊಳ್ಳಲಾಗುವುದು ಎಂದು ಅವರು (ಯೋಗಿ) ಬಹಿರಂಗವಾಗಿಯೇ ಹೇಳಿದ್ದರು. ವ್ಯಾಪಕವಾಗಿ ಹರಿದಾಡಿದ ಆಡಿಯೊವೊಂದು ಆಘಾತಕಾರಿಯಾಗಿದೆ. ಹಿಂಸೆಗಿಳಿಯುವ ಪ್ರತಿಭಟನಕಾರರನ್ನು ಜಜ್ಜಿ ಹಾಕಲು ತಮಗೆ ಮುಖ್ಯಮಂತ್ರಿಯ ಸೂಚನೆ ಇದೆ. ಪ್ರತಿಯೊಬ್ಬರಿಗೂ ಇದರಿಂದ ಪಾಠ ಕಲಿಸಬಹುದು ಎಂದು ಈ ಧ್ವನಿಮುದ್ರಿಕೆಯಲ್ಲಿ ಇದೆ. ಇಂತಹ ಕ್ರೌರ್ಯ ಮತ್ತು ಕಾನೂನು–ಸುವ್ಯವಸ್ಥೆ ಮುರಿದು ಬಿದ್ದಿರುವುದನ್ನು ದೇಶದ ಪ್ರಧಾನಿಯೇ ಬೆಂಬಲಿಸಿರುವುದು ವಿಷಾದನೀಯ’ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್‌, ಕವಿತಾ ಕೃಷ್ಣನ್‌, ಹರ್ಷ ಮಂದರ್‌, ನದೀಮ್ ಖಾನ್‌ ಮುಂತಾದವರು ಸತ್ಯಶೋಧನಾ ಸಮಿತಿಯಲ್ಲಿ ಇದ್ದರು. ಪ್ರತಿಭಟನಕಾರರ ಮೇಲೆ ಸರ್ಕಾರಿ ಪ್ರಾಯೋಜಕತ್ವದ ದಾಳಿಯನ್ನು ನಿಲ್ಲಿಸಬೇಕು. ಪೊಲೀಸ್‌ ವಶದಲ್ಲಿರುವ ಅಮಾಯಕರನ್ನು ಬಿಡುಗಡೆ ಮಾಡಬೇಕು, ಅಪರಿಚಿತ ಆರೋಪಿಗಳ ಮೇಲೆ ದಾಖಲಾಗಿರುವ ಅಸಂಖ್ಯ ಎಫ್‌ಐಆರ್‌ಗಳನ್ನು ರದ್ದುಪಡಿಸಬೇಕು. ‘ಪ್ರತಿಭಟನೆ, ಹಿಂಸಾಚಾರ, ಪೊಲೀಸ್‌ ಅತಿರೇಕ ಮತ್ತು ಹತ್ಯೆಗಳ ಬಗ್ಗೆಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಯಬೇಕು ಎಂದು ಸತ್ಯಶೋಧನಾ ಸಮಿತಿಯು ಆಗ್ರಹಿಸಿದೆ.

‘ಪೊಲೀಸ್‌ ವಶದಲ್ಲಿರುವವರ ಬಗ್ಗೆ ವಿಚಾರಿಸಲು ಹೋದ ಮಾಧ್ಯಮ ಪ್ರತಿನಿಧಿಗಳು, ಮಾನವ ಹಕ್ಕು ಹೋರಾಟಗಾರರು ಮತ್ತು ವಕೀಲರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಪೊಲೀಸ್‌ ದೌರ್ಜನ್ಯ ನಡೆದ ಸ್ಥಳಗಳಿಗೆ ಹೋಗಲು ವಿರೋಧ ಪಕ್ಷಗಳ ನಾಯಕರಿಗೂ ಅವಕಾಶ ಕೊಡಲಾಗಿಲ್ಲ. ಹಾಗಾಗಿ, ಪೊಲೀಸ್‌ ದೌರ್ಜನ್ಯ ಯಾವ ಮಟ್ಟದಲ್ಲಿದೆ ಎಂಬುದು ನಿಖರವಾಗಿ ಇನ್ನೂ ತಿಳಿದಿಲ್ಲ’ ಎಂದು ವರದಿಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.