ADVERTISEMENT

ಗಾಂಧೀಜಿ ತ್ಯಾಗ ಹಳಿಯುವ ಆಡಳಿತ ಮೆಚ್ಚುವವರಿದ್ದಾರೆ: BJP-RSS ವಿರುದ್ಧ ಕೈ ಕಿಡಿ

ಪಿಟಿಐ
Published 30 ಜನವರಿ 2025, 9:57 IST
Last Updated 30 ಜನವರಿ 2025, 9:57 IST
<div class="paragraphs"><p>ನವದೆಹಲಿಯಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಸಮಾಧಿಗೆ ಮಲ್ಲಿಕಾರ್ಜುನ ಖರ್ಗೆ ಗುರುವಾರ ಗೌರವ ಸಲ್ಲಿಸಿದರು. ರಾಹುಲ್ ಗಾಂಧಿ ಇದ್ದಾರೆ</p></div>

ನವದೆಹಲಿಯಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಸಮಾಧಿಗೆ ಮಲ್ಲಿಕಾರ್ಜುನ ಖರ್ಗೆ ಗುರುವಾರ ಗೌರವ ಸಲ್ಲಿಸಿದರು. ರಾಹುಲ್ ಗಾಂಧಿ ಇದ್ದಾರೆ

   

ಪಿಟಿಐ ಚಿತ್ರ

ನವದೆಹಲಿ: ‘ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾತ್ಮಾ ಗಾಂಧಿ ಅವರ ಕೊಡುಗೆಯನ್ನು ಅಲ್ಲಗಳೆಯುವ ಹಾಗೂ ನಿಜವಾದ ಸ್ವಾತಂತ್ರ್ಯ 2024ರ ಜ. 22ರಂದು ಸಿಕ್ಕಿತು ಎಂದೆನ್ನುವ ಆಡಳಿತವನ್ನೇ ಹಾಡಿಹೊಗಳುವ ಜನರಿದ್ದಾರೆ’ ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಅನ್ನು ಹುತಾತ್ಮ ದಿನದ ಸಂದರ್ಭದಲ್ಲಿ ಕಾಂಗ್ರೆಸ್‌ ಟೀಕಿಸಿದೆ.

ADVERTISEMENT

ಮಹಾತ್ಮಾ ಗಾಂಧೀಜಿ ಅವರನ್ನು ಹತ್ಯೆಗೈದ ದಿನವಾದ ‘ಹುತಾತ್ಮ ದಿನದಂದು’ ಅವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.

‘ಭಾರತದ ಕಲ್ಪನೆಯ ಉಳಿವು ರಾಷ್ಟ್ರಪಿತನ ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ಅಡಗಿದೆ. ಸತ್ಯ, ಅಹಿಂಸೆ, ಸರ್ವೋದಯ ಹಾಗೂ ಸರ್ವಧರ್ಮ ಸಮನ್ವಯ ಎಂಬ ಗಾಂಧೀಜಿ ಅವರ ಕಲ್ಪನೆಗಳು ದೇಶ ಮುನ್ನಡೆಸುವ ದಾರಿ ದೀಪಗಳಾಗಿವೆ. ನಿಮ್ಮ ಹೃದಯಲ್ಲಿರುವ ಭಯವನ್ನು ಕಿತ್ತೊಗೆಯುವುದೇ ನೀವು ನನಗೆ ಕೊಡಬಹುದಾದ ಉಡುಗೊರೆ ಎಂದು ಗಾಂಧೀಜಿ ಹೇಳಿದ್ದರು’ ಎಂದು ನೆನಪಿಸಿಕೊಂಡರು.

‘ದೇಶದ ಪ್ರತಿಯೊಬ್ಬ ಪ್ರಜೆಯ ಜೀವನದ ಗುಣಮಟ್ಟ ಉತ್ತಮಪಡಿಸಿ, ಅವರನ್ನು ಮುಖ್ಯವಾಹಿನಿಗೆ ತರುವುದನ್ನು ತಡೆಯುತ್ತಿರುವವರ ವಿರುದ್ಧ ಹೋರಾಡಲು ನಾವು ಸದಾ ಬದ್ಧ. ವಿವಿಧತೆಯಲ್ಲಿ ಏಕತೆ ಎಂಬ ಭಾರತದ ಆತ್ಮವನ್ನು ರಕ್ಷಿಸಬೇಕಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಮತ್ತು ಸಮಾನತೆ ಸಿಗುವಂತೆ ಮಾಡಬೇಕಿದೆ’ ಎಂದಿದ್ದಾರೆ.

‘ಗಾಂಧೀಜಿ ಎನ್ನುವುದು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಭಾರತದ ಆತ್ಮ ಹಾಗೂ ಪ್ರತಿಯೊಬ್ಬ ಭಾರತೀಯರಲ್ಲಿ ಈಗಲೂ ಇದ್ದಾರೆ. ಸತ್ಯದ ಶಕ್ತಿ, ಅಹಿಂಸೆ ಹಾಗೂ ನಿರ್ಭಯತೆಯು ದೊಡ್ಡ ಸಾಮ್ರಾಜ್ಯದ ಬೇರುಗಳನ್ನೇ ಅಲುಗಾಡಿಸಿವೆ. ಇಂಥ ಮಹಾನ್‌ ವ್ಯಕ್ತಿಯ ಜೀವನದ ಹಲವು ತತ್ವಗಳನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಅಳವಡಿಸಿಕೊಂಡಿವೆ. ಬಾಪುಗೆ ಕೋಟಿ, ಕೋಟಿ ನಮನಗಳು’ ಎಂದಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡು, ‘ಮಹಾತ್ಮಾ ಗಾಂಧಿ ಅವರು ಹುತಾತ್ಮರಾಗಿ 77 ವರ್ಷಗಳು ಕಳೆದಿವೆ. ಮಹಾತ್ಮನಿಗೆ ಗುಂಡಿಕ್ಕಿ ಕೊಂದವನು ನಾಥೂರಾಮ್ ಗೋಡ್ಸೆ. ಆಗ ಒಂದು ವಿಚಾರವಿತ್ತು ಮತ್ತು ವಿಷಕಾರಿ ವಿಚಾರಗಳನ್ನು ಹರಡಿ, ಪರಿಸರ ಕೆಡಿಸುವವರೂ ಇದ್ದರು. ಇವೆಲ್ಲದರ ಪರಿಣಾಮವೇ ರಾಷ್ಟ್ರಪಿತನ ಹತ್ಯೆ’ ಎಂದಿದ್ದಾರೆ.

‘ಗಾಂಧಿ ಮತ್ತು ಗೋಡ್ಸೆ ನಡುವೆ ಒಬ್ಬರನ್ನು ಆಯ್ಕೆ ಮಾಡಲು ಇಂದಿನ ಆಡಳಿತಾರೂಢ ಸಂಸದರನ್ನು ಕೇಳಿದರೆ, ಸಮಯ ತೆಗೆದುಕೊಂಡು ಯೋಚಿಸುವವರು ಇದ್ದಾರೆ. ಇವರೆಲ್ಲರೂ ಸರ್ಕಾರದಲ್ಲಿ ಪ್ರಭಾವಿ ಹುದ್ದೆ ಹೊಂದಿದ್ದಾರೆ ಮತ್ತು ಅಂಬೇಡ್ಕರ್‌ ಅವರಂತೆಯೇ ಗಾಂಧೀಜಿ ಅವರನ್ನು ಟೀಕಿಸುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು 1947ರ ಆ. 15ರಂದು ಗಾಂಧೀಜಿಯಿಂದಲ್ಲ ಬದಲಿಗೆ 2024ರ ಜ. 22ರಂದು ಎಂದು ಹೇಳುವವರಿದ್ದಾರೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ ಅವರ ಮಾತುಗಳಿಗೆ ತಿರುಗೇಟು ನೀಡಿದ್ದಾರೆ. 

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಂತರ ದೇಶದಲ್ಲಿ ನಿಜವಾದ ಸ್ವಾತಂತ್ರ್ಯ ಲಭಿಸಿತು ಎಂಬ ಮೋಹನ ಭಾಗವತ ಅವರ ಮಾತುಗಳನ್ನು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.