ADVERTISEMENT

ಕುಟುಂಬ ರಾಜಕಾರಣ ಕುರಿತ ಮೋದಿ ಹೇಳಿಕೆಗೆ ತಮಿಳುನಾಡು ಸಿಎಂ ಸ್ಟಾಲಿನ್ ತಿರುಗೇಟು

ಪಿಟಿಐ
Published 6 ಮಾರ್ಚ್ 2024, 12:26 IST
Last Updated 6 ಮಾರ್ಚ್ 2024, 12:26 IST
<div class="paragraphs"><p>ನರೇಂದ್ರ ಮೋದಿ ಮತ್ತು ಎಂ.ಕೆ.ಸ್ಟಾಲಿನ್</p></div>

ನರೇಂದ್ರ ಮೋದಿ ಮತ್ತು ಎಂ.ಕೆ.ಸ್ಟಾಲಿನ್

   

ಚೆನ್ನೈ: ‘ಸಹಸ್ರಾರು ಕೋಟಿ ರೂಪಾಯಿಯ ಹಗರಣಗಳನ್ನು ಬಹಿರಂಗಪಡಿಸುತ್ತಿರುವ ಕಾರಣ ಕುಟುಂಬ ರಾಜಕಾರಣ ನಡೆಸುತ್ತಿರುವ ಪಕ್ಷಗಳು ತಮ್ಮನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿವೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮಿಳುನಾಡಿನಲ್ಲಿ ಕುಟುಂಬ ರಾಜಕಾರಣ ಇರುವುದು ನಿಜ. ಆದರೆ, ನಮ್ಮ ಕುಟುಂಬ ರಾಜ್ಯದ ಪ್ರತಿಯೊಬ್ಬರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

ಕೆಲವರು (ಬಿಜೆಪಿಗರು) ತಮಿಳುನಾಡಿನಲ್ಲಿ ಡಿಎಂಕೆ ಕುಟುಂಬ ರಾಜಕಾರಣ ನಡೆಸುತ್ತಿದೆ ಎಂದು ಹೇಳುತ್ತಾರೆ. ಹೌದು, ನಮ್ಮದು ಕುಟುಂಬ ರಾಜಕಾರಣವೇ! ತಮಿಳುನಾಡಿನ ಪ್ರತಿ ಕುಟುಂಬಕ್ಕೂ ಸಹಾಯ ಹಸ್ತ ನೀಡುವ ಕುಟುಂಬ ಎಂದು ಹೇಳುವ ಮೂಲಕ ಮೋದಿ ವಿರುದ್ಧ ಸ್ಟಾಲಿನ್ ಲೇವಡಿ ಮಾಡಿದ್ದಾರೆ.

‘ಕೇಂದ್ರದ ಹಣ ನೇರವಾಗಿ ರಾಜ್ಯದ ಜನತೆಗೆ ತಲುಪುತ್ತಿದೆ ಎಂದು ಮೋದಿ ಹೇಳಿದ್ದಾರೆ. ಆದರೆ, ಪ್ರವಾಹ ಸಂತ್ರಸ್ತರಿಗೆ ಕೇಂದ್ರದಿಂದ ಒಂದು ರೂಪಾಯಿಯೂ ಸಿಕ್ಕಿಲ್ಲ ಎಂಬು ವಾಸ್ತವ. ಕೇಂದ್ರದಿಂದ ಯಾರಾದರೂ ಪರಿಹಾರ ಪಡೆದಿದ್ದರೆ ಸಾಬೀತುಪಡಿಸಲಿ’ ಎಂದು ಸ್ಟಾಲಿನ್ ಕುಟುಕಿದ್ದಾರೆ.

‘ಚೆನ್ನೈ, ತೂತುಕುಡಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಅಪಾರ ನಷ್ಟ ಸಂಭವಿಸಿತ್ತು. ಇದರಿಂದಾಗಿ ₹37,000 ಕೋಟಿ ಪರಿಹಾರ ನೀಡುವಂತೆ ನಾವು ಕೇಂದ್ರಕ್ಕೆ ಮನವಿ ಮಾಡಿದ್ದೆವು. ಆದರೆ, ಈವರೆಗೆ ಪ್ರಧಾನಿ ಮೋದಿಯವರು ಕನಿಷ್ಠ ₹1 ಕೂಡ ಬಿಡುಗಡೆ ಮಾಡಿಲ್ಲ’ ಎಂದು ಸ್ಟಾಲಿನ್ ಗುಡುಗಿದ್ದಾರೆ.

ನಮ್ಮ ಸರ್ಕಾರ ಜನರ ಕಲ್ಯಾಣಕ್ಕಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ₹3,406 ಕೋಟಿ ಖರ್ಚು ಮಾಡಿದೆ. ಇದು ನಮ್ಮ ಬದ್ಧತೆಗೆ ಸಾಕ್ಷಿ ಎಂದು ಹೇಳಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೋದಿ, ‘ಜಮ್ಮು ಮತ್ತು ಕಾಶ್ಮೀರದಿಂದ ತಮಿಳುನಾಡಿನವರೆಗೆ ಕುಟುಂಬ ರಾಜಕಾರಣ ನಡೆಯುತ್ತಿದ್ದು, ಇದು ಅಪಾಯಕಾರಿ ಪ್ರವೃತ್ತಿಯಾಗಿದೆ’ ಎಂದು ವಿರೋಧ ಪಕ್ಷಗಳ ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.