ADVERTISEMENT

'ಘಜ್ವಾ–ಎ–ಹಿಂದ್' ಕನಸು ಕಾಣುತ್ತಿರುವವರಿಗೆ ನರಕಕ್ಕೆ ಟಿಕೆಟ್ ನೀಡುತ್ತೇವೆ: ಯೋಗಿ

ಸಂಜಯ ಪಾಂಡೆ
Published 28 ಸೆಪ್ಟೆಂಬರ್ 2025, 15:08 IST
Last Updated 28 ಸೆಪ್ಟೆಂಬರ್ 2025, 15:08 IST
<div class="paragraphs"><p>ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ</p></div>

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

   

ಕೃಪೆ: ಪಿಟಿಐ

ಲಖನೌ: ಉತ್ತರ ಪ್ರದೇಶದಲ್ಲಿ ಕೋಮು ಸಾಮರಸ್ಯ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ರಾಜ್ಯದಲ್ಲಿ ಆರಂಭವಾಗಿರುವ 'ಐ ಲವ್‌ ಮೊಹಮ್ಮದ್‌' ಪೋಸ್ಟರ್‌ ವಿವಾದದ ಬೆನ್ನಲ್ಲೇ, ಈ ರೀತಿಯ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಬಲರಾಮ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಯೋಗಿ, 'ಯಾರೆಲ್ಲ ಘಜ್ವಾ–ಎ–ಹಿಂದ್ (ಭಾರತದಲ್ಲಿ ಇಸ್ಲಾಮಿ ಆಳ್ವಿಕೆ ತರುವುದು) ಕನಸು ಕಾಣುತ್ತಿದ್ದಾರೋ ಅವರಿಗೆ ನರಕದ ಟಿಕೆಟ್‌ ನೀಡುತ್ತೇವೆ' ಎಂದಿದ್ದಾರೆ.

'ಕೆಲವರು ಭಾರತದಲ್ಲಿ ಬದುಕುತ್ತಿದ್ದಾರೆ. ಆದರೆ, ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಾ, ರಾಷ್ಟ್ರದ್ರೋಹದ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಭಾರತದ ಮಣ್ಣಲ್ಲಿ ಇದಕ್ಕೆಲ್ಲ ಅವಕಾಶ ನೀಡುವುದಿಲ್ಲ. ಇಂತಹ ಶಕ್ತಿಗಳ ವಿರುದ್ಧ ಹೇಗೆ ವ್ಯವಹರಿಸಬೇಕು ಎಂಬುದು ನಮಗೆ ಗೊತ್ತಿದೆ' ಎಂದು ಹೇಳಿದ್ದಾರೆ.

ಬರೇಲಿಯಲ್ಲಿ ಪೋಸ್ಟರ್‌ ವಿಚಾರವಾಗಿ ಶುಕ್ರವಾರ ನಡೆದ ಪ್ರತಿಭಟನೆ ಕುರಿತು ಮಾತನಾಡಿರುವ ಸಿಎಂ, ನಂಬಿಕೆ ಎಂಬುದು ರಸ್ತೆಗಳಲ್ಲಿ ಪ್ರದರ್ಶನಕ್ಕೆ ಇಡುವಂತಹದ್ದಲ್ಲ ಎಂದಿದ್ದಾರೆ. 'ಬರೇಲಿಯಲ್ಲಿ ಜನರಿಗೆ ತೊಂದರೆ ನೀಡುತ್ತಿರುವವರನ್ನು ನಮ್ಮದೇ ರೀತಿಯಲ್ಲಿ ನಿಭಾಯಿಸುತ್ತೇವೆ' ಎಂದೂ ಕಟುವಾಗಿ ಹೇಳಿದ್ದಾರೆ.

'ಐ ಲವ್‌ ಮೊಹಮ್ಮದ್‌' ಪೋಸ್ಟರ್‌ಗಳನ್ನು ಮಕ್ಕಳ ಕೈಗೆ ಕೊಡುವ ಮೂಲಕ ದೇಶದ ಭವಿಷ್ಯವನ್ನು ಹಾಳುಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಸಾಕಷ್ಟು ಮಕ್ಕಳು ಭಾಗವಹಿಸಿದ್ದರು.

ಪ್ರತಿಭಟನೆಗೆ ಕರೆ ನೀಡಿದ್ದ ಮುಸ್ಲಿಂ ಧರ್ಮಗುರು ಮೌಲಾನಾ ತೌಕಿರ್ ರಜಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನೂರಾರು ಅಪರಿಚಿತ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘರ್ಷಣೆ ಸಂದರ್ಭದ 20ಕ್ಕೂ ಹೆಚ್ಚು ಪೊಲೀಸರೂ ಗಾಯಗೊಂಡಿದ್ದಾರೆ.

ತೌಕಿರ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.