ADVERTISEMENT

'ಮೋದಿ ಗ್ಯಾರಂಟಿ ನಂಬಿ ಮೋಸ ಹೋದ ಮಹಿಳೆಯರು': ದೆಹಲಿ CM ಭೇಟಿಗೆ ಸಮಯ ಕೇಳಿದ ಆತಿಶಿ

ಪಿಟಿಐ
Published 22 ಫೆಬ್ರುವರಿ 2025, 9:26 IST
Last Updated 22 ಫೆಬ್ರುವರಿ 2025, 9:26 IST
<div class="paragraphs"><p>ಎಎಪಿ ನಾಯಕಿ ಆತಿಶಿ</p></div>

ಎಎಪಿ ನಾಯಕಿ ಆತಿಶಿ

   

ಪಿಟಿಐ

ನವದೆಹಲಿ: ಬಿಜೆಪಿಯು ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಮಾಸಿಕ ₹ 2,500 ನೆರವು ನೀಡುವ ಯೋಜನೆ ಕುರಿತು ಚರ್ಚಿಸಲು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಎಎಪಿ ಶಾಸಕರೊಂದಿಗೆ ಸಭೆ ನಡೆಸಬೇಕು ಎಂದು ಮಾಜಿ ಸಿಎಂ ಆತಿಶಿ ಶನಿವಾರ ಒತ್ತಾಯಿಸಿದ್ದಾರೆ.

ADVERTISEMENT

ಗುಪ್ತಾ ಅವರಿಗೆ ಪತ್ರ ಬರೆದಿರುವ ಆತಿಶಿ, 'ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಹೊಸ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಿಲ್ಲವೇಕೆ?' ಎಂದು ಪ್ರಶ್ನಿಸಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ಈ ತಿಂಗಳ ಆರಂಭದಲ್ಲಿ ಮತದಾನ ನಡೆದು, ಫಲಿತಾಂಶ ಪ್ರಕಟವಾಗಿದೆ. 48 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ, ರಾಷ್ಟ್ರ ರಾಜಧಾನಿಯಲ್ಲಿ ಬರೋಬ್ಬರಿ ಎರಡೂವರೆ ದಶಕದ ಬಳಿಕ ಅಧಿಕಾರಕ್ಕೇರಿದೆ. ನೂತನ ಸರ್ಕಾರದ ಮುಖ್ಯಮಂತ್ರಿಯಾಗಿರುವ ಗುಪ್ತಾ ಹಾಗೂ ಅವರ ಸಂಪುಟದ ಸಚಿವರು ಗುರುವಾರವಷ್ಟೇ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಹಿಂದಿನ ಎಎಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಆತಿಶಿ, ತಮ್ಮ ಪಕ್ಷದ ಶಾಸಕರೊಂದಿಗೆ ಗುಪ್ತಾ ಅವರನ್ನು ಭಾನುವಾರ (ಫೆಬ್ರುವರಿ 23ರಂದು) ಭೇಟಿ ಮಾಡಲು ಸಮಯ ಕೋರಿದ್ದಾರೆ.

'ಜನವರಿ 31ರಂದು ದ್ವಾರಕಾದಲ್ಲಿ ಪ್ರಚಾರದ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ದೆಹಲಿಯ ಸಹೋದರಿಯರು ಮತ್ತು ತಾಯಂದಿರಿಗೆ ಮಾಸಿಕ ₹ 2,500 ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ರಚನೆಯಾದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಮೊದಲ ಸಂಪುಟ ಸಭೆ ಫೆಬ್ರುವರಿ 20ರಂದು ನಡೆದಿದೆ. ಆದರೆ, ಯೋಜನೆ ಜಾರಿಯಾಗಿಲ್ಲ' ಎಂದು ಟೀಕಿಸಿರುವ ಆತಿಶಿ, 'ಮೋದಿಯವರ ಭರವಸೆ ನಂಬಿದ್ದ ದೆಹಲಿ ಮಹಿಳೆಯರು ವಂಚನೆಗೊಳಗಾಗಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಮುಖ್ಯಮಂತ್ರಿ ಗುಪ್ತಾ ಸೇರಿದಂತೆ ಬಿಜೆಪಿಯ ಹಲವು ನಾಯಕರು, ಪಕ್ಷ ನೀಡಿರುವ ಭರವಸೆಯಂತೆಯೇ ಈ ಯೋಜನೆಯನ್ನು ಮಾರ್ಚ್‌ನಿಂದ ಜಾರಿಗೆ ತರುವುದಾಗಿ ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.