ತಮಿಳುನಾಡಿನ ಚೆನ್ನೈನಲ್ಲಿ ಮೀನುಗಾರರು ಸಮುದ್ರಕ್ಕೆ ಗುರುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು
ಪಿಟಿಐ ಚಿತ್ರ
ಬೆಂಗಳೂರು: ಎರಡು ದಶಕಗಳ ಹಿಂದೆ ಪ್ರಬಲ ಭೂಕಂಪದಿಂದಾಗಿ ಹಿಂದೂ ಮಹಾಸಾಗರದಲ್ಲಿ ಎದ್ದಿದ್ದ ರಕ್ಕಸ ಅಲೆಗಳು ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ 2.30 ಲಕ್ಷ ಜನರನ್ನು ಬಲಿ ತೆಗೆದುಕೊಂಡಿತ್ತು. ಆ ಭೀಕರತೆಗೆ ಕಳದುಕೊಂಡ ತಮ್ಮವರನ್ನು ನೆನೆದು ಕುಟುಂಬಸ್ಥರು ಗುರುವಾರ ಕಣ್ಣೀರಾದರು.
2004ರ ಡಿ. 26ರಂದು ಇಂಡೊನೇಷ್ಯಾದ ಆ್ಯಚ್ ಎಂಬ ತೀರ ಪ್ರದೇಶದ ಭೂಗರ್ಭದಲ್ಲಿ 9.1 ತೀವ್ರತೆಯ ಕಂಪನ ಉಂಟಾದ ಪರಿಣಾಮ ಹಿಂದೂ ಮಹಾಸಾಗರದಲ್ಲಿ ಗರಿಷ್ಠ 57 ಅಡಿಗಳಷ್ಟು ಎತ್ತರದ ಅಲೆಗಳು ಉಂಟಾಗಿದ್ದವು. ಇದರ ಪರಿಣಾಮ ಕೇವಲ ಇಂಡೊನೇಷ್ಯಾಗೆ ಮಾತ್ರವಲ್ಲ, ಥಾಯ್ಲೆಂಡ್, ಶ್ರೀಲಂಕಾ, ಭಾರತ ಸೇರಿದಂತೆ ಒಂಭತ್ತು ರಾಷ್ಟ್ರಗಳನ್ನೇ ಆಘಾತಕ್ಕೂ ನೂಕಿತ್ತು.
ಈ ರಕ್ಕಸ ಅಲೆಗೆ ಬಲಿಯಾದವರಲ್ಲಿ ಅರ್ಧದಷ್ಟು ಜನ ಇಂಡೊನೇಷ್ಯಾಗೆ ಸೇರಿದವರು. ಭಾರತದಲ್ಲಿ ಸುಮಾರು 16 ಸಾವಿರ ಜನ ಪ್ರಾಣ ಕಳೆದುಕೊಂಡರು. ಶ್ರೀಲಂಕಾದಲ್ಲಿ 35 ಸಾವಿರ, ಥ್ಯಾಯ್ಲೆಂಡ್‌ನಲ್ಲಿ 8 ಸಾವಿರ ಜನ ಪ್ರಾಣ ತೆತ್ತರು. ಇವರಲ್ಲಿ ಹಲವರು ನಾಪತ್ತೆಯಾದರು. ಇನ್ನೂ ಹಲವರ ಗುರುತೇ ಪತ್ತೆಯಾಗದೆ, ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಯಿತು.
ತಮಿಳುನಾಡಿನ ತೀರ ಪ್ರದೇಶದಲ್ಲಿ ಎರಡು ದಶಕಗಳ ಹಿಂದೆ ಉಂಟಾಗಿದ್ದ ಸುನಾಮಿಯಲ್ಲಿ ಕಳೆದುಕೊಂಡ ತಮ್ಮವರ ನೆನಪಿನಲ್ಲಿ ದುಃಖತಪ್ತ ಮಹಿಳೆಯ ಆಕ್ರಂದನ
ಆ ಕರಾಳ ದಿನದ ನೆನಪಿನಲ್ಲಿ ಈಗಲೂ ಸುನಾಮಿ ಭಾದಿತ ಪ್ರದೇಶದಲ್ಲಿ ತಮ್ಮವರ ನೆನೆದು ಅವರ ಕುಟುಂಬಸ್ಥರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅಂದಿನ ಆ ಭೂಕಂಪದ ಕೇಂದ್ರ ಬಿಂದುವಾದ ಆ್ಯಚ್‌ನಲ್ಲಿ ಗ್ರ್ಯಾಂಡ್ ಬೈತುರಹಮಾನ್ ಮಸೀದಿ ಬಳಿ ಸೇರಿದ ನೂರಾರು ಜನರು ಮೂರು ನಿಮಿಷಗಳ ಮೌನಾಚರಣೆ ನಡೆಸಿರುವುದಾಗಿ ವರದಿಯಾಗಿದೆ.
ಶ್ರೀಲಂಕಾದ ಗಾಲ್ಲೇಯಲ್ಲಿರುವ ಪೆರಲಿಯಾ ಸುನಾಮಿ ಸ್ಮಾರಕದಲ್ಲಿ ನೆರೆದ ಜನರು ಸುನಾಮಿಗೆ ಪ್ರಾಣ ತೆತ್ತ ಜನರಿಗಾಗಿ ಅಲ್ಲಿ ಎರಡು ನಿಮಿಷ ಮೌನಾಚರಣೆ ಮೂಲಕ ಗೌರವ ಸಮರ್ಪಿಸಲಾಯಿತು.
2004ರ ಸುನಾಮಿ ಭಾರತದ ತಮಿಳುನಾಡನ್ನು ತೀವ್ರವಾಗಿ ಬಾಧಿಸಿತ್ತು. ಎರಡು ದಶಕಗಳ ಹಿಂದಿನ ಆ ದುರ್ಘಟನೆ ನೆನೆದು ಅಲ್ಲಿನ ಜನರು ಮೊಂಬತ್ತಿ ಹಚ್ಚಿ ಗೌರವ ಸಲ್ಲಿಸಿದರು.
ಥಾಯ್ಲೆಂಡ್‌ನ ಬಾನ್ ನಾಮ್ ಖೆಮ್ ಗ್ರಾಮದಲ್ಲಿ ಧಾರ್ಮಿಕ ಕ್ರಿಯೆ ಮೂಲಕ ಅಗಲಿದವರನ್ನು ನೆನೆಯಲಾಯಿತು. ಅಲ್ಲಿ ನಿರ್ಮಿಸಿರುವ ಸುನಾಮಿ ಗೋಡೆಯ ಬಳಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು, ಪ್ರಾರ್ಥನೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.