
ಖುಷ್ಬು, ಶಿವಾಜಿ ಕೃಷ್ಣಮೂರ್ತಿ
ಚೆನ್ನೈ: ರಾಜ್ಯಪಾಲ ಆರ್.ಎನ್. ರವಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಸಾರ್ವಜನಿಕ ಸಭೆಯಲ್ಲಿ ಅಶ್ಲೀಲ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಪಕ್ಷದ ನಾಯಕ ಶಿವಾಜಿ ಕೃಷ್ಣಮೂರ್ತಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ರಾಜ್ಯಪಾಲ ಆರ್.ಎನ್. ರವಿ, ಬಿಜೆಪಿ ನಾಯಕಿ ಖುಷ್ಬು ಸುಂದರ್, ಅಣ್ಣಾಮಲೈ ಹಾಗೂ ಎಐಎಡಿಎಂಕೆ ಮುಖಂಡ ಪಳನಿಸ್ವಾಮಿ ವಿರುದ್ಧ ಶಿವಾಜಿ ಕೃಷ್ಣಮೂರ್ತಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಸಂಬಂಧ ರಾಜ್ಯಪಾಲರು, ಬಿಜೆಪಿ ನಾಯಕರು ಸೇರಿ ಮೂರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಎಗ್ಮೋರ್ ನ್ಯಾಯಾಲಯ ಮೂರು ಪ್ರಕರಣಗಳಲ್ಲಿ ಶಿವಾಜಿ ಕೃಷ್ಣಮೂರ್ತಿಗೆ ₹20,000 ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ ಅನುಭವಿಸಿರುವ ನ್ಯಾಯಾಂಗ ಬಂಧನಾವಧಿಯನ್ನು ಶಿಕ್ಷೆಯಲ್ಲಿ ಕಡಿತಗೊಳಿಸಲಾಗುತ್ತದೆ.
ಶಿವಾಜಿ ಕೃಷ್ಣಮೂರ್ತಿ ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಡಿಎಂಕೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು.
ಖುಷ್ಬು ತೀರ್ಪನ್ನು ಸ್ವಾಗತಿಸಿದ್ದು, ಇದು ನನಗೆ ಸಂಬಂಧಿಸಿದ ಜಯವಲ್ಲ, ಇಂತಹ ಅವಹೇಳನ ಎದುರಿಸುತ್ತಿರುವ ಪ್ರತಿಯೊಬ್ಬ ಮಹಿಳೆಯ ಜಯವಾಗಿದೆ. ಇಂತಹವರ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.