ಜಲ್‌ಪೈಗುರಿ: ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ರಂಜಿತ್ ಅಧಿಕಾರಿ ಮೃತ ವ್ಯಕ್ತಿಯಾಗಿದ್ದು, ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಕೊಲೆಯಲ್ಲಿ ಬಿಜೆಪಿ ಭಾಗಿಯಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಆದರೆ, ಇದು ಆಡಳಿತ ಪಕ್ಷದಲ್ಲಿನ ಆಂತರಿಕ ಕಲಹದ ಪರಿಣಾಮ ಎಂದು ಬಿಜೆಪಿ ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಈ ಮಧ್ಯೆ ಈ ಹತ್ಯೆ ಸಂಭವಿಸಿದೆ.
ಭಾನುವಾರ ರಾತ್ರಿ ಪಕ್ಷದ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅಧಿಕಾರಿಯನ್ನು ಮೇನಗುರಿ ಬ್ಲಾಕ್‌ನ ಸಪ್ತಿಬಾರಿ ಎಂಬಲ್ಲಿ ಹಲ್ಲೆ ಮಾಡಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅಧಿಕಾರಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿಯೇ ಅವರು ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿ ಹತ್ಯೆಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸ್ಥಳೀಯ ಟಿಎಂಸಿ ಮುಖಂಡ ಶಿವಶಂಕರ್ ಮಜುಂದಾರ್ ಆರೋಪಿಸಿದ್ದಾರೆ.
ಟಿಎಂಸಿ ಆರೋಪವನ್ನು ಜಲ್‌ಪೈಗುರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೀಪೇನ್ ಪ್ರಮಾಣಿಕ್ ಅಲ್ಲಗಳೆದಿದ್ದಾರೆ. ಈ ಕೊಲೆ ಟಿಎಂಸಿಯಲ್ಲಿನ ಒಳಜಗಳದ ಪರಿಣಾಮ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
***
ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಹತ್ಯೆ, ಹಿಂಸಾಚಾರಗಳ ಕುರಿತ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.