
ಪಾನ್ ಮಸಾಲಾ, ಗುಟ್ಕಾ ( ಸಾಂಕೇತಿಕ ಚಿತ್ರ)
ನವದೆಹಲಿ: ದೇಶದಲ್ಲಿ ಸಿಗರೇಟ್, ಪಾನ್ ಮಸಾಲ ಮತ್ತು ಗುಟ್ಕಾ ಮೇಲಿನ ತೆರಿಗೆ ಪದ್ಧತಿಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಈ ಉತ್ಪನ್ನಗಳ ಬೆಲೆ ತುಟ್ಟಿಯಾಗಲಿದೆ.
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಮಂಡಿಸಲಿದ್ದಾರೆ.
‘ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ 2025’ ಹಾಗೂ ‘ಕೇಂದ್ರ ಅಬಕಾರಿ ಕಾಯ್ದೆ ತಿದ್ದುಪಡಿ ಮಸೂದೆ‘ ಎಂಬ ಎರಡು ವಸೂದೆಗಳನ್ನು ಈ ಅಧಿವೇಶನದ ಅವಧಿಯೊಳಗೆ ಮಂಡಿಸುವರು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಸಿಗರೇಟ್, ಪಾನ್ ಮಸಾಲ ಮತ್ತು ಗುಟ್ಕಾದಂತಹ ಉತ್ಪನ್ನಗಳಿಗೆ ಶೇ.28ರಷ್ಟು ಜಿಎಸ್‌ಟಿ ಜೊತೆಗೆ ‘ಪರಿಹಾರ ಸೆಸ್’ ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ತೆಗೆದು ಹಾಕಿ ಹೊಸದಾಗಿ ಮಂಡಿಸುತ್ತಿರುವ ಎರಡು ಮಸೂದೆಗಳ ಅಡಿಯಲ್ಲಿ ತೆರಿಗೆ ವಿಧಿಸುವುದರಿಂದ ಈ ಉತ್ಪನ್ನಗಳ ಬೆಲೆ ಈಗಿನ ದರಕ್ಕಿಂತೆ ತುಟ್ಟಿಯಾಗಲಿದೆ ಎನ್ನಲಾಗಿದೆ.
ಸಚಿವರು ಮಸೂದೆ ಮಂಡಿಸಿದ ಬಳಿಕ ಹೊಸ ತೆರಿಗೆ ವಿಧಾನ ಗೊತ್ತಾಗಲಿದೆ. ಈ ತೆರಿಗೆ ಪದ್ಧತಿ 2026 ಏಪ್ರಿಲ್‌ನಿಂದ ಜಾರಿಗೆಯಾಗಲಿದೆ ಎಂದು ವರದಿಗಳು ಹೇಳಿವೆ. ಬೆಲೆ ಎಷ್ಟು ಹೆಚ್ಚಳವಾಗಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ತೆಗೆದುಹಾಕಿ ಕೇಂದ್ರ ಅಬಕಾರಿ ತೆರಿಗೆ ಅಡಿಯಲ್ಲಿ ಮರಳಿ ತರಲು ಕೇಂದ್ರ ಸರ್ಕಾರ ಯೋಜಿಸಿದೆ. ಇದರಿಂದ ತೆರಿಗೆ ಸಂಗ್ರಹವನ್ನು ಸುಲಭಗೊಳಿಸುವುದು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಪಾನ್ ಮಸಾಲಾ, ಗುಟ್ಕಾ ಮತ್ತು ತಂಬಾಕು ಆಧಾರಿತ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ. ಈ ಕಾರಣಕ್ಕಾಗಿ, ಕೇಂದ್ರ ಸರ್ಕಾರವು ಅವುಗಳ ಬಳಕೆಯನ್ನು ಕಡಿಮೆ ಮಾಡಲು ಹೆಚ್ಚಿನ ತೆರಿಗೆಗಳನ್ನು ವಿಧಿಸುವ ನೀತಿಯನ್ನು ಮುಂದುವರಿಸುತ್ತದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.