ADVERTISEMENT

ಏಪ್ರಿಲ್ 1ರಿಂದ ಟೋಲ್‌ ಪ್ಲಾಜಾ ನಗದು ರಹಿತ: ಎನ್‌ಎಚ್‌ಎಐ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 15:47 IST
Last Updated 20 ಫೆಬ್ರುವರಿ 2026, 15:47 IST
<div class="paragraphs"><p>ಟೋಲ್‌ </p></div>

ಟೋಲ್‌

   

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಸಂಪೂರ್ಣ ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಗೆ ತರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದ್ದು, ಏಪ್ರಿಲ್‌ 1ರಿಂದ ನಗದು ಪಾವತಿ ವ್ಯವಸ್ಥೆಯನ್ನು ನಿಲ್ಲಿಸಲು ಯೋಜಿಸಿದೆ.

ಹೊಸ ವ್ಯವಸ್ಥೆ ಕಾರ್ಯರೂಪಕ್ಕೆ ಬಂದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಟೋಲ್ ಪ್ಲಾಜಾಗಳಲ್ಲಿ ಪಾವತಿಗಳಿಗೆ ಫಾಸ್ಟ್‌ಟ್ಯಾಗ್ ಅಥವಾ ಯುಪಿಐನಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಮಾತ್ರ ಬಳಸಬೇಕಾಗುತ್ತದೆ. ಯಾವುದೇ ನಗದು ಪಾವತಿಗೆ ಅವಕಾಶ ಇರುವುದಿಲ್ಲ.

ADVERTISEMENT

ಟೋಲ್‌ ಪಾವತಿಗೆ ಸಂಬಂಧಿಸಿದಂತೆ ಈಗ ಇರುವ ನಿಯಮದ ಪ್ರಕಾರ, ಸಕ್ರಿಯ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್‌ ಪ್ಲಾಜಾ ಪ್ರವೇಶಿಸುವ ವಾಹನಗಳು ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸುವುದಾದರೆ ಸಾಮಾನ್ಯ ಟೋಲ್ ಶುಲ್ಕದ ಎರಡು ಪಟ್ಟು ಹೆಚ್ಚು ಪಾವತಿಸಬೇಕು. ಆದರೆ, ಯುಪಿಐ ಮೂಲಕ ಶುಲ್ಕ ಪಾವತಿ ವಿಧಾನ ಆಯ್ಕೆ ಮಾಡಿಕೊಂಡರೆ, ಸಾಮಾನ್ಯ ಟೋಲ್ ಶುಲ್ಕದ 1.25 ಪಟ್ಟು ಶುಲ್ಕ ಪಾವತಿ ಮಾಡಬೇಕು. 

‘ಡಿಜಿಟಲ್ ಪಾವತಿ ವ್ಯವಸ್ಥೆಗೆ ಮಾತ್ರ ಅವಕಾಶ ನೀಡುವುದರಿಂದ ಟೋಲ್‌ ಪ್ಲಾಜಾಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಟೋಲ್ ವಹಿವಾಟುಗಳಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲು ಸಾಧ್ಯವಾಗಲಿದೆ. ವಾಹನಗಳ ತಡೆರಹಿತ ಸಂಚಾರದೊಂದಿಗೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ’ ಎಂದು ಎನ್‌ಎಚ್‌ಎಐ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.