ADVERTISEMENT

ಏಳು ತಿಂಗಳು ಪೂರೈಸಿದ ರೈತ ಪ್ರತಿಭಟನೆ; ರಾಜಭವನಕ್ಕೆ ಮೆರವಣಿಗೆ ಯತ್ನ

ಪಿಟಿಐ
Published 26 ಜೂನ್ 2021, 21:49 IST
Last Updated 26 ಜೂನ್ 2021, 21:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ : ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್‌ನ ರಾಜ್ಯಪಾಲರ ಮನೆ ಮುಂದೆ ಪ್ರತಿಭಟನೆ ನಡೆಸಲು ಪ್ರಯತ್ನಿಸಿದ ರೈತರನ್ನು ಪೊಲೀಸರು ಶನಿವಾರ ಜಲಫಿರಂಗಿಗಳನ್ನು ಬಳಸಿ ಚದುರಿಸಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯು ಶನಿವಾರ ಏಳು ತಿಂಗಳು ಪೂರೈಸಿದೆ. ಈ ಸಂದರ್ಭದಲ್ಲಿ, ವಿವಿಧ ರಾಜ್ಯಗಳಲ್ಲಿ ರಾಜಭವನಕ್ಕೆ ಮೆರವಣಿಗೆ ನಡೆಸುವ ಕಾರ್ಯಕ್ರಮವನ್ನು ರೈತರು ಹಮ್ಮಿಕೊಂಡಿದ್ದರು.

ಮಹಿಳೆಯರೂ ಸೇರಿದಂತೆ ರಾಜ್ಯದ ಬೇರೆಬೇರೆ ಭಾಗಗಳಿಂದ ಬಂದಿದ್ದ ರೈತರು ಅಂಬ ಸಾಹಿಬ್‌ ಗುರುದ್ವಾರಾದಲ್ಲಿ ಸೇರಿ, ಅಲ್ಲಿಂದ ರಾಜಭವನದತ್ತ ಮೆರವಣಿಗೆ ಆರಂಭಿಸಿದ್ದರು. ಚಂಡೀಗಡ– ಮೊಹಾಲಿ ಗಡಿಯಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ಒಳನುಗ್ಗಲು ಪ್ರಯತ್ನಿಸಿದ್ದರು.
ಪ್ರತಿಭಟನಕಾರರಲ್ಲಿ ಒಬ್ಬರು ಜಲಫಿರಂಗಿ ಇರುವ ವಾಹನದ ಮೇಲೆ ಏರಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಜಲಫಿರಂಗಿ ಬಳಸಿ ರೈತರನ್ನು ಚದುರಿಸಿದರು.

ADVERTISEMENT

ಹರಿಯಾಣ, ಪಂಜಾಬ್‌, ಕರ್ನಾಟಕ, ಉತ್ತರಾಖಂಡ ಮುಂತಾದ ರಾಜ್ಯಗಳಲ್ಲಿ ಪ್ರತಿಭಟನಾನಿರತ ರೈತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ. ಇದನ್ನು ಪೊಲೀಸರು ನಿರಾಕರಿಸಿದ್ದಾರೆ.

ರಾಕೇಶ್‌ ಟಿಕಾಯತ್‌ ನೇತೃತ್ವದಲ್ಲಿ ರೈತರ ಗುಂಪೊಂದು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಜತೆ ವರ್ಚುವಲ್ ಸಭೆ ನಡೆಸಿ, ನಂತರ ಡಿಸಿಪಿ ಅವರಿಗೆ ತಮ್ಮ ಬೇಡಿಕೆಗಳ ಪತ್ರವನ್ನು ಹಸ್ತಾಂತರಿಸಿದೆ. ಆ ನಂತರ ಮೆರವಣಿಗೆಯನ್ನು ಕೈಬಿಟ್ಟಿತು.

ಮಾತುಕತೆಗೆ ಸಿದ್ಧ

‘ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಸರ್ಕಾರವು ರೈತರ ಜತೆಗೆ ಮಾತುಕತೆಗೆ ಸಿದ್ಧವಿದೆ. ರೈತರು ಪ್ರತಿಭಟನೆಯನ್ನು ಬಿಟ್ಟು ಮಾತುಕತೆಗೆ ಬರಬೇಕು’ ಎಂದು ಕೇಂದ್ರದ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಮನವಿ ಮಾಡಿದ್ದಾರೆ.

‘ದೇಶದಾದ್ಯಂತ ಹೆಚ್ಚಿನ ರೈತರು ಈ ಕಾನೂನುಗಳ ಪರವಾಗಿದ್ದಾರೆ. ಆದರೂ ಯಾವುದೇ ರೈತರಿಗೆ ಆಕ್ಷೇಪಗಳಿದ್ದರೆ ಅವರ ಜತೆ ಮಾತುಕತೆಗೆ ಸರ್ಕಾರ ಸಿದ್ಧವಿದೆ. ಈಗಾಗಲೇ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ಹೆಚ್ಚಿಸಿದೆ, ಖರೀದಿಯ ಪ್ರಮಾಣವನ್ನೂ ಹೆಚ್ಚಿಸಲಾಗಿದೆ’ ಎಂದು ತೋಮರ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.