
ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

‘ಅಧಿಕಾರ ಹಸ್ತಾಂತರ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಇತಿಶ್ರೀ ಹಾಡುವ ಯೋಗ್ಯತೆ ಕಾಂಗ್ರೆಸ್ ಹೈಕಮಾಂಡ್‌ಗೆ ಇಲ್ಲ. ಹೀಗೆಯೇ ಮುಂದೂಡುವ ಮನಸ್ಥಿತಿಯಲ್ಲಿದೆ. ಸಿದ್ದರಾಮಯ್ಯ ಯಾವಾಗಲೂ ಸೀಟ್ ಭದ್ರಪಡಿಸಿಕೊಂಡೇ ಇರುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದು ನನ್ನ ಕೈಯಲ್ಲಿಲ್ಲ. ಅದೇನಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಮಾನ ಮಾಡಬೇಕು’ ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ 21 ಮಂದಿಯನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ವಿವಾದಿತ ‘ದಿ ಕೇರಳ ಸ್ಟೋರಿ–2’ ಚಿತ್ರ ಬಿಡುಗಡೆಗೆ ಏಕ ಸದಸ್ಯ ಪೀಠ ನೀಡಿದ್ದ ತಡೆಯನ್ನು ಕೇರಳ ಹೈಕೋರ್ಟ್ ಶುಕ್ರವಾರ ತೆರವುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಸ್.ಎ. ಧರ್ಮಾಧಿಕಾರಿ ಹಾಗೂ ಪಿ.ವಿ ಬಾಲಕೃಷ್ಣನ್ ಅವರಿದ್ದ ವಿಭಾಗೀಯ ಪೀಠವು, ನ್ಯಾಯಮೂರ್ತಿ ಬೇಚು ಕುರಿಯನ್ ಥೋಮಸ್ ಅವರು ನೀಡಿದ್ದ ತಡೆ ಆದೇಶವನ್ನು ತೆರವುಗೊಳಿಸಿತು.
ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ನಟರಾಜನ್ ಚಂದ್ರಶೇಖರನ್ ಅವರನ್ನು ಮುಂದುವರಿಸುವ ಕುರಿತು ಟಾಟಾ ಟ್ರಸ್ಟ್‌ನ ಅಧ್ಯಕ್ಷ ನಿಯೋಲ್ ಟಾಟಾ ಕೆಲವೊಂದು ಷರತ್ತುಗಳನ್ನು ಮುಂದೂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉಪ್ಪಿನಿಂದ ಸಾಫ್ಟ್‌ವೇರ್ ಅಭಿವೃದ್ಧಿ ಉದ್ಯಮ ಹೊಂದಿರುವ ಟಾಟಾ ಕಂಪನಿಗೆ ಚಂದ್ರಶೇಖರನ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಒಮ್ಮತದ ನಿರ್ಧಾರ ತೆಗೆದುಕೊಂಡ ಟಾಟಾ ಟ್ರಸ್ಟ್‌ನ ಶಿಫಾರಸುಗಳ ಕುರಿತೂ ಒಳಗಿನಿಂದಲೇ ಅಪಸ್ವರಗಳು ಕೇಳಿಬರುತ್ತಿರುವ ಚರ್ಚೆಗಳು ನಡೆದಿವೆ.
ಭಾರಿ ವಿವಾದಕ್ಕೆ ಕಾರಣವಾಗಿದ್ದ 2017ರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳ ಚಿತ್ರನಟ ದಿಲೀಪ್ ಹಾಗೂ ಇನ್ನಿತರರನ್ನು ಖುಲಾಸೆಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಕೇರಳ ಸರ್ಕಾರ ಶುಕ್ರವಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಡಿಜಿಟಲ್ ವೇದಿಕೆಗಳಲ್ಲಿರುವ ವಿಷಯಗಳ ಹೊಣೆಗಾರಿಕೆಯನ್ನು ಅವುಗಳೇ ಹೊರಬೇಕು. ಮಕ್ಕಳು ಹಾಗೂ ಡಿಜಿಟಲ್ ಬಳಕೆದಾರರ ಸುರಕ್ಷತೆಯು ಕೂಡ ಅವರದೇ ಹೊಣೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ಈ ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಪ್ರಥಮ ಮಹಿಳೆಯೊಬ್ಬರು ಅಥವಾ ದೇಶದ ಪ್ರಥಮ ಪ್ರಜೆಯೊಬ್ಬರು ಭದ್ರತಾ ಮಂಡಳಿ ಸಭೆಯೊಂದರ ಅಧ್ಯಕ್ಷತೆ ವಹಿಸಿದಂತಾಗುತ್ತದೆ ಎಂದು ವಿಶ್ವಸಂಸ್ಥೆ ವಕ್ತಾರ ಸ್ಟೀಫನ್ ದುಜಾರಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಂಗ್ಲಾದೇಶ ರಾಜಧಾನಿ ಢಾಕಾದ ಅಗ್ರಗಾಂವ್‌ನಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ.
ಬಿಎಂಡಿ ಭೂಕಂಪನ ಕೇಂದ್ರದಿಂದ ನೈಋತ್ಯ ಭಾಗದಲ್ಲಿ ಭೂಕಂಪ ಉಂಟಾಗಿದೆ. ಕೋಲ್ಕತ್ತ ಸೇರಿ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಗಿದೆ.
ತಾಲಿಬಾನ್ ಆಡಳಿತವಿರುವ ಅಫ್ಗಾನಿಸ್ತಾನ ವಿರುದ್ಧ 'ಬಹಿರಂಗ ಯುದ್ಧ' ಆರಂಭಿಸಿರುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಶುಕ್ರವಾರ ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ನಮ್ಮ ತಾಳ್ಮೆಯ ಮಿತಿ ಮೀರಿದೆ. ಇದೀಗ ನಮ್ಮ ಹಾಗೂ ನಿಮ್ಮ ನಡುವೆ ಬಹಿರಂಗ ಯುದ್ಧ ಆರಂಭವಾಗಿದೆ' ಎಂದು ಹೇಳಿದ್ದಾರೆ. 'ಇದು ತಾಲಿಬಾನ್ ಜೊತೆಗಿನ ಮುಖಾಮುಖಿ ಸಂಘರ್ಷ' ಎಂದೂ ಪ್ರಕಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.