
ಪ್ರಾತಿನಿಧಿಕ ಚಿತ್ರ
ಬಿಲಾಸ್‌ಪುರ: ಛತ್ತೀಸಗಢದ ಬಿಲಾಸ್‌ಪುರ ನಿಲ್ದಾಣದ ಬಳಿ ಪ್ಯಾಸೆಂಜರ್ ರೈಲೊಂದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ.
‘ಮೆಮು’ ಪ್ಯಾಸೆಂಜರ್ ರೈಲು ಕೊರಬಾ ಜಿಲ್ಲೆಯ ಗೆವ್ರಾದಿಂದ ಬಿಲಾಸ್‌ಪುರಕ್ಕೆ ಹೋಗುತ್ತಿದ್ದಾಗ ಮಂಗಳವಾರ ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ. ರೈಲು ಗಟೊರಾ ಮತ್ತು ಬಿಲಾಸ್‌ಪುರ ನಿಲ್ದಾಣಗಳ ನಡುವೆ ಇದ್ದಾಗ ಗೂಡ್ಸ್ ರೈಲಿಗೆ ಹಿಂದಿನಿಂದ ಗುದ್ದಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ಯಾಸೆಂಜರ್ ರೈಲು ಸಾಗುತ್ತಿದ್ದ ದಿಕ್ಕಿನಲ್ಲಿಯೇ ಗೂಡ್ಸ್ ರೈಲು ಸಹ ಸಾಗುತ್ತಿತ್ತು. ಡಿಕ್ಕಿಯ ರಭಸಕ್ಕೆ ಪ್ಯಾಸೆಂಜರ್ ರೈಲಿನ ಎಂಜಿನ್ ಮತ್ತು ಮುಂಭಾಗದ ಕೋಚ್, ಗೂಡ್ಸ್ ರೈಲಿನ ಮೇಲೆ ಹೋಗಿದೆ ಎಂದು ಅವರು ಹೇಳಿದರು.
‘ಈ ದುರಂತದಲ್ಲಿ ಇಲ್ಲಿಯವರೆಗೆ ಏಳು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಸಿಲುಕಿಕೊಂಡಿರುವ ಇಬ್ಬರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ’ ಎಂದು ಬಿಲಾಸ್‌ಪುರದ ಜಿಲ್ಲಾಧಿಕಾರಿ ಸಂಜಯ್ ಅಗರ್ವಾಲ್ ಸುದ್ದಿಗಾರರಿಗೆ ತಿಳಿಸಿದರು.
ಗಾಯಗೊಂಡ ಪ್ರಯಾಣಿಕರನ್ನು ಇಲ್ಲಿನ ಅಪೋಲೊ ಆಸ್ಪತ್ರೆ ಮತ್ತು ಛತ್ತೀಸಗಢ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು.
ಪರಿಹಾರ:
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹10 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₹5 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ₹1 ಲಕ್ಷ ಪರಿಹಾರವನ್ನು ರೈಲ್ವೆ ಇಲಾಖೆ ಘೋಷಿಸಿದೆ.
ಅಪಘಾತದ ಕುರಿತು ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್‌ಎಸ್) ಹಂತದಲ್ಲಿ ಸಮಗ್ರ ತನಿಖೆ ನಡೆಸಲಾಗುವುದು. ಕಾರಣಗಳನ್ನು ತಿಳಿದು, ಲೋಪಗಳನ್ನು ಸರಿಪಡಿಸಿಕೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಪ್ರಯಾಣಿಕರು ಮತ್ತು ಅವರ ಕುಟುಂಬಗಳ ಅನುಕೂಲಕ್ಕಾಗಿ ಇಲಾಖೆ ಸಹಾಯವಾಣಿ ಆರಂಭಿಸಿದೆ.
ಅಪಘಾತದಲ್ಲಿ ಮೃತಪಟ್ಟವರ ಕುರಿತು ಕಂಬನಿ ಮಿಡಿದಿರುವ ಛತ್ತೀಸಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ, ‘ರಾಜ್ಯ ಸರ್ಕಾರ ಸಂತ್ರಸ್ತರ ಪರ ನಿಲ್ಲುತ್ತದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.