
ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ
-ಪಿಟಿಐ ಚಿತ್ರ
ಮುಂಬೈ: ಹರ್ಷೋದ್ಗಾರ ಮತ್ತು ಸಂಭ್ರಮಾಚರಣೆಯ ನಡುವೆ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ರಾಜ್ ಠಾಕ್ರೆ ಅವರು ಮುಂಬರುವ ಮಹಾರಾಷ್ಟ್ರ ಪಾಲಿಕೆ ಚುನಾವಣೆಗಳಿಗೆ ಮೈತ್ರಿಯನ್ನು ಘೋಷಿಸಿದ್ದಾರೆ.
‘ನಾವು ಬಹುಕಾಲ ಜತೆಯಾಗಿ ಇರುವುದಕ್ಕಾಗಿ ಜತೆಗೂಡಿದ್ದೇವೆ. ಬಿಜೆಪಿಯೊಂದಿಗಿನ ನಂಟು ತೊರೆದು ಹೊರಬರಲು ಬಯಸುವವರು ಶಿವಸೇನಾ (ಯುಬಿಟಿ)-ಎಂಎನ್ಎಸ್ ಮೈತ್ರಿಕೂಟದೊಂದಿಗೆ ಕೈಜೋಡಿಸಬಹುದು’ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
‘ಯಾವುದೇ ವಿವಾದ, ಭಿನ್ನಾಭಿಪ್ರಾಯಕ್ಕಿಂತ ನಮಗೆ ಮಹಾರಾಷ್ಟ್ರ ಮುಖ್ಯವಾಗಿದೆ’ ಎಂದು ರಾಜ್ ಠಾಕ್ರೆ ತಿಳಿಸಿದ್ದಾರೆ.
ಆದಾಗ್ಯೂ, ಠಾಕ್ರೆ ಸಹೋದರರ ಸೀಟು ಹಂಚಿಕೆಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಸೂಕ್ತ ಸಮಯದಲ್ಲಿ ಈ ಕುರಿತು ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಜುಲೈ ತಿಂಗಳಲ್ಲಿ ಉದ್ಧವ್ ಮತ್ತು ರಾಜ್ ಠಾಕ್ರೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.ಈ ವೇಳೆ ಅವರು ಮಹಾರಾಷ್ಟ್ರ ಸರ್ಕಾರ ಹೊರಡಿಸಿದ್ದ 1–5ನೇ ತರಗತಿವರೆಗಿನ ಮರಾಠಿ ಮತ್ತು ಇಂಗ್ಲಿಷ್ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಪರಿಚಯಿಸುವ ಹೊಸ ಶಿಕ್ಷಣ ನೀತಿಯಡಿಯ ತ್ರಿಭಾಷಾ ಸೂತ್ರ ಮೇಲಿನ ಎರಡು ಆದೇಶವನ್ನು ಹಿಂತೆದುಕೊಳ್ಳುವಂತೆ ಒತ್ತಾಯಿಸಿದ್ದರು.
ಈ ನಡುವೆ, ವಲಸಿಗ ವಿರೋಧಿ ನಿಲುವು ಮತ್ತು ಇತರ ನೀತಿಗಳ ಕಾರಣಕ್ಕಾಗಿ ರಾಜ್ ಅವರ ಪಕ್ಷವೂ ವಿರೋಧ ಪಕ್ಷಕ್ಕೆ ಸೇರುವುದನ್ನು ಕಾಂಗ್ರೆಸ್ ನಿರ್ಬಂಧಿಸಿದ್ದರಿಂದ ಮಹಾ ವಿಕಾಸ್ ಆಘಾಡಿಯಲ್ಲಿ ಬಿರುಕುಗಳು ಹುಟ್ಟಿಕೊಂಡವು.
ಇಬ್ಬರೂ ಠಾಕ್ರೆಗಳ ನೇತೃತ್ವದ ಎರಡೂ ಪಕ್ಷಗಳು ಆರ್ಥಿಕ ರಾಜಧಾನಿ ಮುಂಬೈ ಸೇರಿದಂತೆ ರಾಜ್ಯದ 29 ಮಹಾನಗರ ಪಾಲಿಕೆಗಳ ಪೈಕಿ 6ಕ್ಕೂ ಹೆಚ್ಚು ಪಾಲಿಕೆಗಳಲ್ಲಿ ಒಟ್ಟಾಗಿ ಸ್ಪರ್ಧಿಸುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.