ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
–ಪಿಟಿಐ ಚಿತ್ರ
ತಿರುವನಂತಪುರ: ದೇಶದಲ್ಲಿ ಸಂಘ ಪರಿವಾರದ ಸರ್ಕಾರವು (ಬಿಜೆಪಿ ನೇತೃತ್ವದ ಎನ್‌ಡಿಎ) ಸಂವಿಧಾನವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವುದರಿಂದ ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.
1975ರಲ್ಲಿ ಇಂದಿರಾ ಗಾಂಧಿ ಸರ್ಕಾರ ಘೋಷಿಸಿದ್ದ ತುರ್ತು ಪರಿಸ್ಥಿತಿಯು ‘ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವಾಗಿತ್ತು. ಈ ಕರಾಳ ಅಧ್ಯಾಯ ಅರ್ಧ ಶತಮಾನವನ್ನು ಪೂರೈಸಿದೆ ಎಂದು ಸಿಪಿಐ(ಎಂ) ಮುಖವಾಣಿ ‘ದೇಶಾಭಿಮಾನಿ’ಯಲ್ಲಿ ಪ್ರಕಟವಾದ ತುರ್ತು ಪರಿಸ್ಥಿತಿಯ ಕುರಿತಾದ ಲೇಖನದಲ್ಲಿ ಅವರು ಬೇಸರ ಹೊರಹಾಕಿದ್ದಾರೆ.
‘1975ರ ಜೂನ್ 25ರಂದು ಘೋಷಿಸಿದ ತುರ್ತು ಪರಿಸ್ಥಿತಿಯು ಹಠಾತ್ ಅಥವಾ ಅನಿರೀಕ್ಷಿತ ಘಟನೆ ಆಗಿರಲಿಲ್ಲ. ಬದಲಾಗಿ ಸರ್ವಾಧಿಕಾರಿ ಪ್ರವೃತ್ತಿ ಕ್ರೂರ ಪರಾಕಾಷ್ಠೆಯಾಗಿತ್ತು. ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವವು ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಭಯಾನಕತೆಯನ್ನು ನೆನಪಿಸುತ್ತದೆ’ ಎಂದು ವಿಜಯನ್ ಹೇಳಿದ್ದಾರೆ.
ದೇಶವು ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂದಿರಾ ಗಾಂಧಿ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡರೆ, ಇಂದು ಸಂಘ ಪರಿವಾರದ ಸರ್ಕಾರ ಸಂವಿಧಾನವನ್ನೇ ತೆಗೆದುಹಾಕಲು ಪ್ರಯತ್ನಿಸುತ್ತಿದೆ ಎಂದು ಸಿಪಿಐ ಅವರು ಆರೋಪಿಸಿದ್ದಾರೆ.
ತುರ್ತು ಪರಿಸ್ಥಿತಿಯನ್ನು ಅನುಭವಿಸಿದವರಿಗೆ ಕೇವಲ ಇತಿಹಾಸದ ಪಾಠವಲ್ಲ, ಬದಲಾಗಿ ಕರಾಳ ನೆನಪಾಗಿ ಉಳಿದಿದೆ. ತುರ್ತು ಪರಿಸ್ಥಿತಿ ಅವಧಿಯ ನೆನಪುಗಳನ್ನು ಭವಿಷ್ಯದ ಹೋರಾಟಗಳಿಗೆ ಸ್ಫೂರ್ತಿಯ ಮೂಲವಾಗಿ ತೆಗೆದುಕೊಳ್ಳಬೇಕು ಮತ್ತು ಮುಂದಿನ ಪೀಳಿಗೆಗೂ ಈ ಸಂದೇಶ ರವಾನಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿಜಯನ್ ಅವರನ್ನು ಕೇರಳದಲ್ಲಿ ಭೂಗತ ರಾಜಕೀಯ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ 18 ತಿಂಗಳು ಜೈಲಿನಲ್ಲಿರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.