
ಅಮೆರಿಕ-ಭಾರತ
(ಐಸ್ಟೋಕ್ ಸಾಂದರ್ಭಿಕ ಚಿತ್ರ)
ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ನೂತನ ವಾಣಿಜ್ಯ ಒಪ್ಪಂದದಿಂದ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತ ಭಾರತದ ಮೇಲಿನ ಅಮೆರಿಕ ಸುಂಕ ಕಡಿಮೆಯಾಗಿದೆ.
ನೆರೆಯ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಮೇಲುಗೈ ಸಾಧಿಸಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ.50 ರಿಂದ ಶೇ.18ಕ್ಕೆ ಇಳಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇದಕ್ಕೆ ಬದಲಾಗಿ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ, ಭಾರತ ಇತರೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಬಳಿಕ ಟ್ರಂಪ್ ಸಾಮಾಜಿಕ ಜಾಲತಾಣಗಳಲ್ಲಿ ಈ ಒಪ್ಪಂದವನ್ನು ಪ್ರಕಟಿಸಿದ್ದು, ಮುಂದಿನ ದಿನಗಳಲ್ಲಿ ಭಾರತ ಅಮೆರಿಕದಿಂದ ತೈಲ ಖರೀದಿಸಲಿದ್ದು, ಅಗತ್ಯವಿದ್ದರೆ ವೆನೆಜುವೆಲಾದಿಂದಲೂ ತೈಲ ಖರೀದಿ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಮೇಕ್ ಇನ್ ಇಂಡಿಯಾ ಉತ್ಪನ್ನಗಳ ಮೇಲಿನ ಸುಂಕ ಶೇ.18ಕ್ಕೆ ಇಳಿಕೆಯಾಗಿರುವುದು ಸಂತಸದ ಸಂಗತಿ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ನನ್ನ ಆತ್ಮೀಯ ಸ್ನೇಹಿತ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಿದ್ದು ಅತ್ಯಂತ ಸಂತೋಷಕರ ವಿಚಾರ. ‘ಮೇಕ್ ಇನ್ ಇಂಡಿಯಾ’ ಉತ್ಪನ್ನಗಳ ಮೇಲಿನ ಸುಂಕ ಶೇ.18ಕ್ಕೆ ಇಳಿಕೆಯಾಗುತ್ತಿರುವುದು ಸಂತಸ ತಂದಿದೆ. ಭಾರತದ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳು ಎಂದು ಮೋದಿ ಹೇಳಿದ್ದಾರೆ.
ಇತರೆ ದೇಶಗಳೊಂದಿಗೆ ಸುಂಕ ಹೋಲಿಕೆ...
ಭಾರತ–ಅಮೆರಿಕ ನಡುವಿನ ನೂತನ ವ್ಯಾಪಾರ ಒಪ್ಪಂದದ ಬಳಿಕ, ಚೀನಾ, ಪಾಕಿಸ್ತಾನ, ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಸೇರಿದಂತೆ ಪ್ರಮುಖ ಏಷ್ಯನ್ ದೇಶಗಳಿಗಿಂತ ಭಾರತದ ಮೇಲಿನ ಅಮೆರಿಕ ಸುಂಕ ಕಡಿಮೆಯಾಗಿದೆ. ಆದರೆ ಯುರೋಪಿಯನ್ ರಾಷ್ಟ್ರಗಳು ಹಾಗೂ ಜಪಾನ್, ದಕ್ಷಿಣ ಕೊರಿಯಾ ದೇಶಗಳಿಗೆ ಹೋಲಿಸಿದರೆ ಭಾರತದ ಮೇಲಿನ ಸುಂಕ ಸ್ವಲ್ಪ ಹೆಚ್ಚು ಎನ್ನಲಾಗಿದೆ.
ವಿಯೆಟ್ನಾಂ ಶೇ.20, ಬಾಂಗ್ಲಾದೇಶ ಶೇ.20, ಪಾಕಿಸ್ತಾನ ಶೇ.18, ಮಲೇಷ್ಯಾ ಶೇ.19, ಕಾಂಬೋಡಿಯಾ ಶೇ.19, ಥೈಲ್ಯಾಂಡ್ ಶೇ.19 ಹಾಗೂ ಚೀನಾದ ಮೇಲೆ ಶೇ.37ರಷ್ಟು ಸುಂಕವನ್ನು ಅಮೆರಿಕ ವಿಧಿಸುತ್ತಿದೆ. ನೆರೆಯ ಬಾಂಗ್ಲಾ, ಪಾಕಿಸ್ತಾನ, ಚೀನಾಗಿಂತಲೂ ಭಾರತದ ಮೇಲಿನ ಅಮೆರಿಕ ಸುಂಕ ಕಡಿಮೆಯಾಗಿದೆ.
ಹೆಚ್ಚು ಸುಂಕ ವಿಧಿಸುತ್ತಿರುವ ದೇಶಗಳು...
ಅಮೆರಿಕದಲ್ಲಿ ಟ್ರಂಪ್ ಆಡಳಿತಕ್ಕೆ ಬಂದ ನಂತರ ಹಲವು ದೇಶಗಳ ಮೇಲೆ ವಿವಿಧ ಕಾರಣಗಳಿಗೆ ಅಮೆರಿಕ ಹೆಚ್ಚಿನ ಸುಂಕ ವಿಧಿಸುತ್ತಿದೆ. ಈ ಪೈಕಿ ಬ್ರೆಜಿಲ್ ಶೇ.50, ಮ್ಯಾನ್ಮಾರ್ ಶೇ.40, ಲಾವೋಸ್ ಶೇ.40, ಚೀನಾ ಶೇ.37 ಮತ್ತು ದಕ್ಷಿಣ ಆಫ್ರಿಕಾದ ಮೇಲೆ ಶೇ.30ರಷ್ಟು ಸುಂಕ ವಿಧಿಸಲಾಗುತ್ತಿದೆ.
ಕಡಿಮೆ ಸುಂಕ ವಿಧಿಸುತ್ತಿರುವ ದೇಶಗಳು
ಟ್ರಂಪ್ ಆಡಳಿತದಲ್ಲಿ ಕಡಿಮೆ ಸುಂಕದ ಒಪ್ಪಂದ ಮಾಡಿಕೊಂಡಿರುವ ದೇಶಗಳ ಪೈಕಿ, ಯುನೈಟೆಡ್ ಕಿಂಗ್‌ಡಮ್ ಶೇ.10, ಯುರೋಪಿಯನ್ ಒಕ್ಕೂಟ ಶೇ.15, ಸ್ವಿಟ್ಜರ್‌ಲೆಂಟ್ ಶೇ.15, ಜಪಾನ್ ಶೇ.15 ಮತ್ತು ದಕ್ಷಿಣ ಕೊರಿಯಾದ ಮೇಲೆ ಶೇ.15ರಷ್ಟು ಸುಂಕ ವಿಧಿಸಲಾಗುತ್ತಿದೆ.
ಭಾರತ–ಅಮೆರಿಕ ಒಪ್ಪಂದದ ಷರತ್ತುಗಳು
ಭಾರತ–ಅಮೆರಿಕ ಹಲವು ಒಪ್ಪಂದಗಳನ್ನು ಮಾಡಿಕೊಂಡಿವೆ ಎನ್ನಲಾಗಿದೆ. ಈ ಒಪ್ಪಂದಗಳನ್ನು ಉಭಯ ದೇಶಗಳು ಇನ್ನು ಬಹಿರಂಗಪಡಿಸಿಲ್ಲ. ಆದರೆ ರಾಯಿಟರ್ಸ್ ಸುದ್ದಿಸಂಸ್ಥೆ ಕೆಲವು ಒಪ್ಪಂದ ಮತ್ತು ಷರತ್ತುಗಳನ್ನು ವರದಿ ಮಾಡಿದೆ.
* ಅಮೆರಿಕ ಅಥವಾ ವೆನೆಜುವೆಲಾದಿಂದ ತೈಲ ಖರೀದಿ
* ಬಯೋ–ಅಮೆರಿಕನ್ (ವ್ಯಾಪರ ನೀತಿ) ನೀತಿಗೆ ಭಾರತ ಬದ್ದವಾಗಿರಬೇಕು
* ಭಾರತವು ಅಮೆರಿಕದಿಂದ ಕಲ್ಲಿದ್ದಲು, ಇಂಧನ, ತಂತ್ರಜ್ಞಾನ, ಕೃಷಿ ಹಾಗೂ ಇತರೆ ಉತ್ಪನ್ನಗಳನ್ನು ಖರೀದಿಸಬೇಕು. ಈ ವಹಿವಾಟು 500 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಿರಬೇಕು.
* ಆಯ್ದ ಸರಕುಗಳ ಮೇಲೆ ಭಾರತವು ಅಮೆರಿಕದ ಮೇಲೆ ಶೂನ್ಯ ಸುಂಕ ವಿಧಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.