ADVERTISEMENT

ಕೋವಿಡ್ ಲಸಿಕೆ ಪೂರೈಕೆ: ಪ್ರಧಾನಿ ಮೋದಿಗೆ ಅಮೆರಿಕ ಉಪಾಧ್ಯಕ್ಷೆ ಹ್ಯಾರಿಸ್ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 1:20 IST
Last Updated 4 ಜೂನ್ 2021, 1:20 IST
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ – ರಾಯಿಟರ್ಸ್/ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ – ರಾಯಿಟರ್ಸ್/ಪಿಟಿಐ ಚಿತ್ರ   

ನವದೆಹಲಿ: ಭಾರತಕ್ಕೆ ಕೋವಿಡ್–19 ಲಸಿಕೆ ಪೂರೈಕೆ ಮಾಡುವುದಾಗಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಭರವಸೆ ನೀಡಿದ್ದಾರೆ.

ಮೋದಿ ಜತೆ ಗುರುವಾರ ದೂರವಾಣಿ ಸಂಭಾಷಣೆ ನಡೆಸಿದ ಹ್ಯಾರಿಸ್, ಭಾರತಕ್ಕೆ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳುವಲ್ಲಿ ಅಮೆರಿಕದ ಯೋಜನೆಯೇನು ಎಂಬುದನ್ನು ವಿವರಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ‘ಜಾಗತಿಕ ಲಸಿಕೆ ಹಂಚಿಕೆ ಯೋಜನೆ’ ಘೋಷಿಸಿದ್ದು, ಇದರಡಿ ಭಾರತದ ನೆರವಿಗೆ ಸಿದ್ಧವಿರುವುದಾಗಿ ಹ್ಯಾರಿಸ್ ಹೇಳಿದ್ದಾರೆ.

ADVERTISEMENT

ಈ ವಿಚಾರವಾಗಿ ಬೈಡನ್ – ಹ್ಯಾರಿಸ್ ಮತ್ತು ಅಮೆರಿಕ ಆಡಳಿತವನ್ನು ಮೋದಿ ಶ್ಲಾಘಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತ – ಅಮೆರಿಕ ನಡುವಣ ಬಾಂಧವ್ಯ ಮತ್ತು ಎರಡನೇ ಅಲೆಯನ್ನು ಎದುರಿಸಲು ಭಾರತೀಯ ಅಮೆರಿಕನ್ನರು ನೀಡಿದ ಬೆಂಬಲಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಕೆಲ ಸಮಯದ ಹಿಂದೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಜತೆ ಮಾತನಾಡಿದೆ. ಅಮೆರಿಕದ ಜಾಗತಿಕ ಲಸಿಕೆ ಹಂಚಿಕೆ ಯೋಜನೆಯಡಿ ಭಾರತಕ್ಕೂ ಲಸಿಕೆ ಪೂರೈಕೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಒಗ್ಗಟ್ಟು ಪ್ರದರ್ಶಿಸಿದ್ದಲ್ಲದೆ ಬೆಂಬಲ ಸೂಚಿಸಿದ್ದಕ್ಕಾಗಿ ಅಮೆರಿಕ ಸರ್ಕಾರ, ಅಲ್ಲಿನ ಉದ್ಯಮ ಮತ್ತು ಭಾರತೀಯ ವಲಸಿಗರಿಗೆ ಧನ್ಯವಾದ ಸಮರ್ಪಿಸಿದ್ದೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

‘ಭಾರತ–ಅಮೆರಿಕ ಲಸಿಕೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳು, ಕೋವಿಡೋತ್ತರ ಜಾಗತಿಕ ಆರೋಗ್ಯ ಮತ್ತು ಆರ್ಥಿಕ ಚೇತರಿಕೆಯಲ್ಲಿ ಉಭಯ ದೇಶಗಳ ಸಹಭಾಗಿತ್ವದ ಬಗ್ಗೆಯೂ ಚರ್ಚಿಸಿದ್ದೇವೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.