ADVERTISEMENT

ಡಿಜಿಪಿಯನ್ನೇ ಹುದ್ದೆಯಿಂದ ತೆಗೆದ ಉತ್ತರ ಪ್ರದೇಶದ ಯೋಗಿ ಸರ್ಕಾರ!

ಪಿಟಿಐ
Published 12 ಮೇ 2022, 11:22 IST
Last Updated 12 ಮೇ 2022, 11:22 IST
ಮುಕುಲ್‌ ಗೋಯೆಲ್‌ (ಪಿಟಿಐ)
ಮುಕುಲ್‌ ಗೋಯೆಲ್‌ (ಪಿಟಿಐ)   

ಲಖನೌ: ಅಪರೂಪದ ವಿದ್ಯಮಾನವೊಂದರಲ್ಲಿ ಉತ್ತರ ಪ್ರದೇಶದ ಡಿಜಿಪಿ ಮುಕುಲ್‌ ಗೋಯೆಲ್‌ ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಹುದ್ದೆಯಿಂದ ತೆಗೆದಿದ್ದಾರೆ. ಅಸಮರ್ಥತೆ ಮತ್ತು ನಿರ್ಲಕ್ಷ್ಯದ ಕಾರಣದಿಂದ ಅವರನ್ನು ಹುದ್ದೆಯಲ್ಲಿ ಮುಂದುವರಿಸದಿರಲು ನಿರ್ಧರಿಸಿರುವುದಾಗಿ ಸರ್ಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮಾಹಿತಿ) ನವನೀತ್ ಸೆಹಗಲ್ ಪಿಟಿಐಗೆ ತಿಳಿಸಿದ್ದಾರೆ.

ಗೋಯೆಲ್ ಅವರನ್ನು ನಾಗರಿಕ ರಕ್ಷಣಾ ಇಲಾಖೆಯ ಮಹಾನಿರ್ದೇಶಕ(ಡಿಜಿ) ಆಗಿ ನಿಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ, ಇಲಾಖಾ ಕಾರ್ಯಗಳಲ್ಲಿ ಆಸಕ್ತಿ ವಹಿಸದಿರುವುದು ಮತ್ತು ಅದಕ್ಷತೆಗಾಗಿ ಗೋಯೆಲ್ ಅವರನ್ನು ಡಿಜಿಪಿ ಹುದ್ದೆಯಿಂದ ಕೈಬಿಡಲಾಗಿದೆ ಎಂದು ಸರ್ಕಾರ ಹೇಳಿದೆ.

1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಗೋಯೆಲ್ ಅವರನ್ನು ಕಳೆದ ವರ್ಷ ಜೂನ್‌ನಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.

ಅದಕ್ಕೂ ಮುನ್ನ ಅವರು ಗಡಿ ಭದ್ರತಾ ಪಡೆಯ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದರು.

ಮುಜಾಫರನಗರದವರಾದ ಗೋಯೆಲ್ ಅವರು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.