ADVERTISEMENT

ಉತ್ತರ ಪ್ರದೇಶ | ಲಖನೌನಲ್ಲಿ ಪೊಲೀಸರಿಂದ ಲಂಚಕ್ಕೆ ಬೇಡಿಕೆ; BJP ಶಾಸಕ ಪ್ರತಿಭಟನೆ

ಪಿಟಿಐ
Published 21 ನವೆಂಬರ್ 2025, 8:04 IST
Last Updated 21 ನವೆಂಬರ್ 2025, 8:04 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ಲಖನೌ: ‘ಉತ್ತರ ಪ್ರದೇಶದ ಲಖನೌನಲ್ಲಿ ವಶಪಡಿಸಿಕೊಂಡ ಮೊಬೈಲ್‌ ಫೋನ್‌ ಮರಳಿಸಲು ಪೊಲೀಸರು ಭಾರಿ ಲಂಚದ ಬೇಡಿಕೆ ಇಡುತ್ತಿದ್ದಾರೆ’ ಎಂದು ಆರೋಪಿಸಿ ಬಕ್ಷಿ ಕ ತಲಾಬ್ ಕ್ಷೇತ್ರದ ಶಾಸಕ ಯೋಗೇಶ್ ಶುಕ್ಲಾ ಅವರು ಮಹಿಗವಾನ್‌ ಪೊಲೀಸ್ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.

ADVERTISEMENT

ಘಟನೆ ಕುರಿತು ವಿವರಿಸಿರುವ ಶುಕ್ಲಾ, ‘ವ್ಯಕ್ತಿಯೊಬ್ಬರ ಮೊಬೈಲ್ ಫೋನ್‌ ಬುಧವಾರ ಕಳೆದಿತ್ತು. ಮಹಿಗವಾನ್‌ ಪೊಲೀಸ್ ಠಾಣೆಯಿಂದ ಕರೆ ಬಂದಿತ್ತು. ಮೊಬೈಲ್ ಸಿಕ್ಕಿದೆ ಎಂದು ಹೇಳಿದ ಕಾನ್‌ಸ್ಟೆಬಲ್, ಅದನ್ನು ನೀಡಲು ₹2 ಸಾವಿರ ಲಂಚ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದ’ ಎಂದು ಆರೋಪಿಸಿದ್ದಾರೆ.

‘ಆ ವ್ಯಕ್ತಿ ಪೊಲೀಸ್ ಠಾಣೆಗೆ ಹೋಗಿ ಮೊಬೈಲ್ ಕೊಡುವಂತೆ ಕೋರಿದ್ದಾರೆ. ನನ್ನ ನೆರವನ್ನೂ ಕೋರಿದ್ದರಿಂದ ನಾನು ಮಧ್ಯಪ್ರವೇಶಿಸಿದೆ. ಆ ವ್ಯಕ್ತಿಗೆ ಪೊಲೀಸ್ ಬೆದರಿಕೆಯನ್ನೂ ಹಾಕಿದ್ದಾರೆ. ಫೋನ್‌ ಕೊಡಲೂ ನಿರಾಕರಿಸಿದ್ದಾರೆ’ ಎಂದು ದೂರಿದ್ದಾರೆ.

‘ಪೊಲೀಸರ ಲಂಚಾವತಾರ ಇಷ್ಟಕ್ಕೇ ಮುಗಿಯುವುದಿಲ್ಲ. ವಾಹನ ಸವಾರರ ಬಳಿ ಎಲ್ಲಾ ದಾಖಲೆಗಳಿದ್ದರೂ, ಅವರಿಗೆ ಚಲನ್‌ ನೀಡಿ ಹಣ ಕಟ್ಟುವಂತೆ ಬೆದರಿಸಲಾಗುತ್ತಿದೆ. ಕೇಳಿದರೆ ‘ಗುರಿ ತಲುಪಬೇಕು’ ಎಂಬ ಉತ್ತರ ನೀಡುತ್ತಿದ್ದಾರೆ’ ಎಂದು ಶುಕ್ಲಾ ಆರೋಪಿಸಿದ್ದಾರೆ.

‘ಪೊಲೀಸರು ಲಂಚ ಕೇಳುತ್ತಿರುವ ಘಟನೆಗಳು ಪದೇಪದೇ ನಡೆಯುತ್ತಿರುವುದರಿಂದ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶುಕ್ಲಾ ಪ್ರತಿಭಟನೆ ನಡೆಸಿದರು. ಸ್ಥಳೀಯರೂ ನಮಗೆ ಬೆಂಬಲ ನೀಡಿದರು. ಪೊಲೀಸರ ವಿರುದ್ಧ ಹಲವರು ಘೋಷಣೆ ಕೂಗಿದರು. ಡಿಸಿಪಿ ಗೋಪಾಲ ಕೃಷ್ಣ ಚೌಧರಿ ಅವರು ಶಾಸಕ ಸಮಾಲೋಚನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪರಿಸ್ಥಿತಿಯೂ ಶಾಂತವಾಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

ಘಟನೆ ನಂತರ ಸಬ್‌ ಇನ್‌ಸ್ಪೆಕ್ಟರ್ ಧಿರೇಂದ್ರ ರೈ ಮತ್ತು ಕಾನ್‌ಸ್ಟೆಬಲ್‌ ಪಪ್ಪು ಕುಶ್ವಾ ಅವರನ್ನು ಅಮಾನತುಗೊಳಿಸಲಾಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.