ADVERTISEMENT

Uttarakhand avalanche: ನಾಲ್ವರು ಸಾವು, ಐವರಿಗಾಗಿ ಇನ್ನೂ ಮುಂದುವರಿದ ಶೋಧ

ಪಿಟಿಐ
Published 1 ಮಾರ್ಚ್ 2025, 15:54 IST
Last Updated 1 ಮಾರ್ಚ್ 2025, 15:54 IST
<div class="paragraphs"><p>ಹಿಮಕುಸಿತದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ</p></div>

ಹಿಮಕುಸಿತದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ

   

–ಪಿಟಿಐ ಚಿತ್ರ

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ಗ್ರಾಮದಲ್ಲಿ ಹಿಮಕುಸಿತ ಉಂಟಾದ ಸ್ಥಳದಲ್ಲಿ ಸಿಲುಕಿದ್ದ ಕಾರ್ಮಿಕರ ಪೈಕಿ 50 ಜನರನ್ನು ಹೊರಕ್ಕೆ ಕರೆತರಲಾಗಿದ್ದು, ಅವರಲ್ಲಿ ನಾಲ್ಕು ಮಂದಿ ಶನಿವಾರ ಮೃತ‍ಪಟ್ಟಿದ್ದಾರೆ. ಇನ್ನುಳಿದ ಐದು ಮಂದಿಯನ್ನು ರಕ್ಷಿಸಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆದಿದೆ.

ADVERTISEMENT

ಮಾಣಾ ಮತ್ತು ಬದರೀನಾಥದ ನಡುವೆ ಇರುವ ಗಡಿ ರಸ್ತೆಗಳ ಸಂಸ್ಥೆಯ (ಬಿಆರ್‌ಒ) ಶಿಬಿರದಲ್ಲಿ ಶುಕ್ರವಾರ ಮುಂಜಾನೆ ಹಿಮಕುಸಿತ ಉಂಟಾಯಿತು. ಶಿಬಿರದಲ್ಲಿದ್ದ ಕಂಟೇನರ್‌ಗಳು ಹಾಗೂ ಶೆಡ್‌ ಒಂದರಲ್ಲಿ ಒಟ್ಟು 55 ಮಂದಿ ಸಿಲುಕಿದ್ದರು.

ಮಳೆ ಮತ್ತು ಹಿಮಪಾತದ ಕಾರಣದಿಂದಾಗಿ ಶುಕ್ರವಾರ ರಕ್ಷಣಾ ಕಾರ್ಯಕ್ಕೆ ಅಡ್ಡಿ ಉಂಟಾಗಿತ್ತು. ಶನಿವಾರ ಬೆಳಿಗ್ಗೆ ಹವಾಮಾನವು ಅನುಕೂಲಕರವಾದ ಕಾರಣ ಸೇನಾ ಸಿಬ್ಬಂದಿ ಮತ್ತು ಇಂಡೊ–ಟಿಬೆಟನ್ ಗಡಿ ಪೊಲೀಸ್‌ ಸಿಬ್ಬಂದಿ ರಕ್ಷಣಾ ಕಾರ್ಯವನ್ನು ಮತ್ತೆ ಆರಂಭಿಸಿದರು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಕೆ. ಜೋಷಿ ತಿಳಿಸಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ಆರು ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ. ಗಾಯಗೊಂಡವರ ಪೈಕಿ ಇಬ್ಬರು ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್‌–ರಿಷಿಕೇಶಕ್ಕೆ ಕರೆದೊಯ್ಯಲಾಗಿದೆ ಎಂದು ಗೊತ್ತಾಗಿದೆ. 

ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿಗಾಗಿ ಸೇನೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ.

ಬಿಆರ್‌ಒ ಶಿಬಿರದಲ್ಲಿ ಎಂಟು ಕಂಟೇನರ್‌ಗಳು ಇದ್ದವು. ಆ ಪೈಕಿ ಐದು ಕಂಟೇನರ್‌ಗಳು ಪತ್ತೆಯಾಗಿವೆ, ಮೂರು ಕಂಟೇನರ್‌ಗಳು ನಾಪತ್ತೆಯಾಗಿವೆ. ರಕ್ಷಿಸಲಾಗಿರುವ ಕಾರ್ಮಿಕರ ಪೈಕಿ ಹೆಚ್ಚಿನವರು ಈ ಐದು ಕಂಟೇನರ್‌ಗಳಲ್ಲಿ ಇದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬದರೀನಾಥದಿಂದ ಮೂರು ಕಿ.ಮೀ. ದೂರದಲ್ಲಿ ಇರುವ ಮಾಣಾ ಗ್ರಾಮವು ಭಾರತ–ಟಿಬೆಟ್ ಗಡಿಯಲ್ಲಿನ ಕೊನೆಯ ಗ್ರಾಮ.

ಹಿಮಕುಸಿತ ಉಂಟಾಗಿರುವ ಸ್ಥಳದ ವೈಮಾನಿಕ ಸಮೀಕ್ಷೆ ನಡೆಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಧಾಮಿ ಅವರ ಜೊತೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರೀತಿಯ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.