ಕೇದಾರನಾಥನ ದರ್ಶನಕ್ಕಾಗಿ ಜಮಾಯಿಸಿದ್ದ ಭಕ್ತಸಮೂಹ
–ಪಿಟಿಐ ಚಿತ್ರ
ಡೆಹ್ರಾಡೂನ್: ಉತ್ತರಾಖಂಡದ ಹಲವಡೆ ಮಳೆಯ ರಭಸ ತುಸು ತಗ್ಗಿದೆ. ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇವಸ್ಥಾನಗಳು ಭಕ್ತರಿಗೆ ತೆರೆದಿದ್ದು, ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡಿದ್ದ ಚಾರ್‌ಧಾಮ್ ಯಾತ್ರೆ ಪುನರಾರಂಭಗೊಂಡಿದೆ ಎಂದು ಗರ್ವಾಲ್ ವಿಭಾಗೀಯ ಪೊಲೀಸ್ ಆಯುಕ್ತ ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.
ಚಾರ್‌ಧಾಮ್ ಯಾತ್ರೆ ಸಾಗುವ ಮಾರ್ಗದ ಜಿಲ್ಲೆಗಳಲ್ಲಿ ಹವಾಮಾನ ಪರಿಸ್ಥಿತಿಯನ್ನು ಆಧರಿಸಿ ವಾಹನಗಳನ್ನು ತಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪಾಂಡೆ ಹೇಳಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದರಿಂದ ಹವಾಮಾನ ಇಲಾಖೆ ಭಾನುವಾರ ‘ರೆಡ್ ಅಲರ್ಟ್’ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಹರಿದ್ವಾರ, ಋಷಿಕೇಶ, ಶ್ರೀನಗರ, ರುದ್ರಪ್ರಯಾಗ, ಸೋನ್‌ಪ್ರಯಾಗ ಮತ್ತು ವಿಕಾಸನಗರದಲ್ಲಿ ಯಾತ್ರಾರ್ಥಿಗಳನ್ನು ತಡೆಯಲಾಗಿತ್ತು.
ಮಾರ್ಗ ಮಧ್ಯದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಯಾತ್ರಾರ್ಥಿಗಳಿಗೆ ಸೂಚನೆ ನೀಡಲಾಗಿತ್ತು.
ಉತ್ತರಾಖಂಡದ ಬಾಲಿಗಢದ ಬಾರ್ಕೋಟ್-ಯಮುನೋತ್ರಿ ರಸ್ತೆಯಲ್ಲಿ ಮೇಘಸ್ಫೋಟ ಸಂಭವಿಸಿತ್ತು. ಇದರಿಂದಾಗಿ ಹಠಾತ್ ಪ್ರವಾಹ ಉಂಟಾಗಿ ನಾಪತ್ತೆಯಾಗಿದ್ದ ಒಂಬತ್ತು ಕಾರ್ಮಿಕರನ್ನು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ ಎಂದು ಉತ್ತರಕಾಶಿ ಜಿಲ್ಲಾಧಿಕಾರಿ ಪ್ರಶಾಂತ್ ಆರ್ಯ ತಿಳಿಸಿದ್ದಾರೆ.
ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಮತ್ತು ಚಾರ್‌ಧಾಮ್ ಪವಿತ್ರ ಸ್ಥಳಗಳಿಗೆ ಪ್ರತಿ ವರ್ಷ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.